ಉಡುಪಿ: ಕೇಂದ್ರ ಸರ್ಕಾರ ಜಾತಿಗಣತಿ ಮಾಡುವುದಾಗಿ ಘೋಷಿಸಿದ ಬಳಿಕ ತಾರಾತುರಿಯಲ್ಲಿ ಸಿದ್ದರಾಮಯ್ಯ ಹೊಸ ಜಾತಿಗಣತಿ ಪ್ರಾರಂಭಿಸಿದ್ದಾರೆ. ಇದರಿಂದ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಇದೊಂದು ವ್ಯರ್ಥ ಪ್ರಯತ್ನ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ಸದಸ್ಯರು, ಸಮುದಾಯ ಮುಖಂಡರು ಜಾತಿಗಣತಿ ಬಗ್ಗೆ ಅಪಸ್ವರ ಎತ್ತಿರುವುದನ್ನು ನೋಡಿದ್ದೇವೆ. ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ರಾಜ್ಯದಲ್ಲಿ ಶಿಕ್ಷಕರ ಪರಿಸ್ಥಿತಿ ಗಂಭೀರವಾಗಿದೆ. ಅನಾರೋಗ್ಯ ಪೀಡಿತರು 57 ಮತ್ತು 58 ವರ್ಷ ಮೀರಿದವರು ಒದ್ದಾಡುತ್ತಿದ್ದಾರೆ. ಹಳೆ ಪಿಂಚಣಿ ಕೊಡುತ್ತೇವೆ ಎಂದು ಹೇಳಿ ಮತ ಪಡೆದು ಈಗ ಬದುಕಲು ನೀವು ಬಿಡುತ್ತಿಲ್ಲ. ಸರ್ಕಾರಿ ನೌಕರರಿಗೆ ಇದರಿಂದ ಸಮಸ್ಯೆ ಉಂಟಾಗಿದೆ ಎಂದರು.
ಕಾಂತರಾಜ್ ವರದಿಗೆ 175 ಕೋಟಿ ರೂಪಾಯಿವರೆಗೆ ರ್ಖಚಾಗಿದೆ. ನಂತರ ಹೈಕಮಾಂಡ್ ಕಾಂತರಾಜ್ ತಿರಸ್ಕರಿಸಿತು. ಈಗ ಮತ್ತೆ 200 ರಿಂದ -300 ಕೋಟಿ ರೂ. ಯೋಜನೆ ಹಾಕಿದ್ದಾರೆ. ಹಿಂದುಳಿದ ವರ್ಗದ ಸಾವಿರಾರು ಮಕ್ಕಳಿಗೆ ಈಗ ಹಾಸ್ಟೆಲ್ ಸಿಗುತ್ತಿಲ್ಲ. ಹಿಂದುಳಿದ ವರ್ಗದವರಿಗೆ ದುರ್ಬಲರಿಗೆ ನೆರವಾಗಬೇಕಾದ ಸರ್ಕಾರ ಜಾತಿ ಗಣತಿ ಹೆಸರಲ್ಲಿ ಹಣಪೋಲು ಮಾಡುತ್ತಿದೆ. ಉಪಮುಖ್ಯಮಂತ್ರಿ ಮುಂದುವರೆಯುತ್ತಾರೋ ಇಲ್ಲವೋ ಹೊಸ ಮುಖ್ಯಮಂತ್ರಿಯಾಗುತ್ತಾರೆ ಎಂಬ ಗೊಂದಲವಿದೆ. ಈ ಗೊಂದಲ ಇದ್ದಾಗ ಸರ್ಕಾರಿ ಕೆಲಸಗಳು ಸ್ಥಗಿತ ಆಗುತ್ತದೆ. ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗೋದಿಲ್ಲ. ವಿಎ, ಜಿಲ್ಲಾಧಿಕಾರಿ, ಶಿಕ್ಷಕರು ಎಲ್ಲರೂ ಜಾತಿಗಣತಿಯಲ್ಲಿದ್ದೇವೆ ಎನ್ನುತ್ತಾರೆ. ಅಸ್ಥಿರ ಸರಕಾರ ಇದ್ದಾಗ ಯಾರೂ ಕೆಲಸ ಮಾಡಲ್ಲ ಎಂದರು.

