
ಕರ್ನಾಟಕ ರಾಜ್ಯ ಹಿಂದಿ ಭಾಷಾ ಬೋಧಕರ ಸಂಘ ಹಾಗೂ ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘದ ಸಹಯೋಗದಲ್ಲಿ ಪರ್ಯಾಯ ಸೇದೋರು ಮಠ ಆಶ್ರಯದಲ್ಲಿ ಅಕ್ಟೋಬರ್ 25ರಂದು ರಾಜ್ಯಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ ಉಡುಪಿ ಕೃಷ್ಣಮಠ ರಾಜಾಂಗಣದಲ್ಲಿ ನಡೆಯಿತು.
ವಿದ್ವಾನ್ ನಟರಾಜ್ ಹೆಚ್ಎನ್ ಅವರ ಸುಶ್ರಾವ್ಯ ಹಿಂದಿ ಗೀತ ಗಾಯನದ ತರುವಾಯ, ಉಡುಪಿ ಪರ್ಯಾಯ ಶೀರೂರು ಮಠದ ಜೀವನ ಡಾ ಉದಯಕುಮಾರ್ ಸರಳತ್ತಾಯ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಭಾಷಾ ಕಲಿಕೆಯ ಅಗತ್ಯವನ್ನು ವಿವರಿಸಿದರು. ಭಾಷೆಯನ್ನು ಸರಿಯಾದ ರೀತಿಯಲ್ಲಿ ಸಮರ್ಪಕ ಉಚ್ಚಾರಣೆಯೊಂದಿಗೆ ಬೋಧಕರಿಂದ ಕಲಿಯಬೇಕಾಗುತ್ತದೆ. ಸಮಾಜವನ್ನು ಪರಿವರ್ತಿಸುವ ಮಹಾನ್ ಕಾರ್ಯವನ್ನು ಮಾಡುವ ಅಧ್ಯಾಪಕರು ಸಂಪಾದಿಸುವ ಪುಣ್ಯ ಅತ್ಯಂತ ಪವಿತ್ರವಾದದ್ದು. ಭಾಷಾಭಿಮಾನವನ್ನು ಬೆಳೆಸಿಕೊಳ್ಳಿ ಆದರೆ ದುರಭಿಮಾನ ಬೇಡ ಎಂದು ಸಲಹೆಯನ್ನು ನೀಡಿದರು. ಉಡುಪಿಗೆ ಬಂದಿದ್ದರಿಂದ ಕನಕನ ಕಿಂಡಿಯ ಮೂಲಕ ಭಗವತ್ ದರ್ಶನವನ್ನು ಮಾಡಿಕೊಂಡು ಗ್ರಹಚಾರವನ್ನು ಕಳೆದುಕೊಳ್ಳುವ ಪುಣ್ಯಕಾರ್ಯ ನಿಮ್ಮೆಲ್ಲರಿಗೂ ಲಭಿಸಿದೆ ಎಂದು ಶುಭನುಡಿದರು.

ಸಂಘದ ರಾಜ್ಯ ಅಧ್ಯಕ್ಷ ಶಶಿಧರ್ ಸಿಎಂ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಡಿಎಂ ರಾಟೋಡ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಉಪ ನಿರ್ದೇಶಕ ಲೋಕೇಶ್ ಸಿ, ಡಾ ಅಶೋಕ್ ಕಾಮತ್, ಸ್ಥಾಪಕ ಅಧ್ಯಕ್ಷ ದಿನಕರ ಶೆಟ್ಟಿ, ನಾಗರಾಜ್, ಜಿಲ್ಲಾಧ್ಯಕ್ಷ ಎಚ್ಎನ್ ವೆಂಕಟೇಶ್, ಕಾಮ್ಸ್ ಅಧ್ಯಕ್ಷ ಶಶಿಕುಮಾರ್, ರಾಮಾಂಜನೇಯ, ಕೋಶಾಧಿಕಾರಿ ಸತೀಶ್ ನಾಯ್ಕ್, ಹಾಜರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ ಸ್ವಾಗತಿಸಿದರು.
ಮಂಗಳೂರು ಕವಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಡಯಟ್ ಪ್ರಾಂಶುಪಾಲ, ಉಪ ನಿರ್ದೇಶಕ ಡಾ ಅಶೋಕ ಕಾಮತ್ ಅಧ್ಯಕ್ಷತೆಯಲ್ಲಿ ಭಾವೈಕ್ಯತೆಗಾಗಿ ಭಾಷೆಗಳ ಕೊಡುಗೆ ವಿಷಯದ ಗೋಷ್ಠಿ ನಡೆಯಿತು. ಜಿಲ್ಲಾ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ತೃತೀಯ ಭಾಷೆಯ ಮಹತ್ವದ ಬಗ್ಗೆ ರಾಜ್ಯಾಧ್ಯಕ್ಷ ಶಶಿಧರ್ ಸಿಎಂ, ಡಾ ಮಾಲತೇಶ್, ಉಮೇಶ್ ದೊಡ್ಡಮನಿ, ನರಸಿಂಹ ಎನ್ ಭಟ್, ಹಾಗೂ ಇತರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಊಟದ ತರುವಾಯ ಸಾಂಸ್ಕೃತಿಕ ವೈಭವ ಶಿಕ್ಷಕರನ್ನು ರಂಜಿಸಿತು.
ವರದಿ ರಾಯಿ ರಾಜ ಕುಮಾರ್
