ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ

0
58

ಸುಳ್ಯ : ಎದುರಿನ ಕಾರೊಂದು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಎದುರಿನ ಕಾರಿಗೆ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಕರಿಕ್ಕಳ–ನಿಂತಿಕಲ್ ಮಧ್ಯೆ ಮುಚ್ಚಿಲ ಎಂಬಲ್ಲಿ ನಡೆದಿದೆ.

ಅಪಘಾತದ ಪರಿಣಾಮ ಶಾಸಕಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಕರಿಕ್ಕಳದಿಂದ ನಿಂತಿಕಲ್ ಕಡೆಗೆ ಶಾಸಕಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಎದುರಿನಿಂದ ಸಾಗುತ್ತಿದ್ದ ಕಾರು ಏಕಾಏಕಿ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಹಿಂದಿನಿಂದ ಬರುತ್ತಿದ್ದ ಶಾಸಕರ ಕಾರು ನಿಯಂತ್ರಣ ತಪ್ಪಿ ಆ ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಶಾಸಕಿ ಬೇರೊಂದು ಕಾರಿನಲ್ಲಿ ತಮ್ಮ ಮನೆಗೆ ತೆರಳಿದ್ದಾರೆ. ಶಾಸಕಿ ಹಾಗೂ ಚಾಲಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಅಪಘಾತದಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.