ಶಿಕ್ಷಕರ ದಿನಾಚರಣೆ 3 ಖ್ಯಾತ ವೈದ್ಯರಿಗೆ ಪ್ರಶಸ್ತಿ ಪ್ರದಾನ

0
7

ಮಂಗಳೂರು : “ಶಿಕ್ಷಕರ ವೃತ್ತಿ ಶ್ರೇಷ್ಠ ಮತ್ತು ಗೌರವಾನ್ವಿತ ವೃತ್ತಿಯಾಗಿದ್ದು, ಅವರ ಪ್ರಾಮಾಣಿಕ, ನಿಸ್ವಾರ್ಥ ಸೇವಾ ಮನೋಭಾವ, ಕರ್ತವ್ಯ ನಿಷ್ಠೆ, ಸಮಯಪ್ರಜ್ಞೆಯಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಶ್ರದ್ಧೆಯಿಂದ ಮೌಲ್ಯಾಧಾರಿತ ಶಿಕ್ಷಣ ಧಾರೆಯೆರೆದು ಉಜ್ವಲ ಭವಿಷ್ಯ ಮತ್ತು ಉತ್ತಮ ಪ್ರಜೆಗಳಾಗಿ ರೂಪಿಸುವ ಶಿಕ್ಷಕರ ಪಾತ್ರ ಅಮೂಲ್ಯ” ಎಂದು ಉಡುಪಿ ನಗರ ಮೂಲದ ಖ್ಯಾತ ಕಾಂತಾರ ಚಲನ ಚಿತ್ರ ನಟಿ, ಖ್ಯಾತ ಶಾಸ್ತ್ರೀಯ ನೃತ್ಯ ಕಲಾವಿದೆ ಶ್ರೀಮತಿ ಮಾನಸಿ ಸುಧೀರ್ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ಹಾಗೂ ವೈದ್ಯಕೀಯ ಶಾಸ್ತ್ರ ತಜ್ಞರ ಸಂಘದ ಜಂಟಿ ಆಶ್ರಯದಲ್ಲಿ ತಾ: 07.09.2026ರಂದು ನಗರದ ಡಾ| ಎ.ವಿ ರಾವ್ ಸಭಾಂಗಣದಲ್ಲಿ ಜರಗಿದ ‘ಶಿಕ್ಷಕರ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಬೆಂಗಳೂರು ನಗರ [ಪಶ್ಚಿಮ] ಮೂಲದ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶಯ ಸಲ್ಲಿಸಿದರು. ಗೌರವ ಅತಿಥಿಯಾಗಿ ಪಾಲ್ಗೊಂಡ ನಗರದ ತೇಜಸ್ವಿನಿ ಆಸ್ಪತ್ರೆಯ ನಿರ್ದೆಶಕರಾದ ಡಾ| ಶಾಂತರಾಮ್ ಶೆಟ್ಟಿಯವರು ಶಿಕ್ಷಕರು ವಿದ್ಯಾರ್ಥಿಗಳ ಅಜ್ಞಾನದ ಕತ್ತಲೆಯನ್ನು ನಂದಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ದಿವ್ಯ ಶಕ್ತಿಯನ್ನು ಹೊಂದಿದ್ದಾರೆ ಅಲ್ಲದೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೇಧಾವಿಗಳಾಗಿದ್ದಾರೆ ಎಂದು ನುಡಿದರು.

ಬೆಂಗಳೂರು ನಗರ ಮೂಲದ ಇನ್ಸ್ಟಿಟ್ಯೂಟ್ ಆಫ್ ನೆಪ್ರೊ ಯುರೋಲೊಜಿ ಸಂಸ್ಥೆಯ ಪ್ರಾಧ್ಯಾಪಕರಾದ ಡಾ| ಶಿವಲಿಂಗಯ್ಯ ಎಂ ರವರು ಡಾ| ಅನಿಮೇಶ್ ಜೈನ್ ಸಂಪಾದಕ್ವದ ಗೃಹವಾರ್ತಾ ಪತ್ರಿಕೆ ‘ಮೆಡಿಲೋರ್’ ಬಿಡುಗಡೆಗೊಳಿಸಿದರು. ತುಮಕೂರು ನಗರ ಮೂಲದ ಡಾ| ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ| ನಾಗರಾಜ್ ರಾವ್ ಎ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೆ.ಎಸ್ ಹೆಗ್ಡೆ ವೈದ್ಯಕೀಯ ಕಾಲೇಜಿನ ಅರಿವಳಿಕೆ ಶಾಸ್ತ್ರ ಪ್ರಾಧ್ಯಾಪಕ ಡಾ| ಆನಂದ ಬಂಗೇರ, ಕೆ.ಎಂ.ಸಿ ವೈದ್ಯಕೀಯ ಕಾಲೇಜಿನ ಮೂತ್ರರೋಗ ಶಾಸ್ತ್ರ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾದ ಡಾ| ರಂಜಿತ್ ಶೆಟ್ಟಿ, ಕೆ.ಎಂ.ಸಿ ವೈದ್ಯಕೀಯ ಕಾಲೇಜಿನ ರೋಗಲಕ್ಷಣ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ| ಶಾರದಾ ರೈ ರವರು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ, ಸಾಧಿಸಿದ ಗಮನಾರ್ಥ ಸಾಧನೆಯನ್ನು ಪರಿಗಣಿಸಿ ಶಿಕ್ಷಕರ ದಿನಾಚರಣೆಯ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಸದಾನಂದ ಪೂಜಾರಿಯವರು ಸ್ವಾಗತಿಸಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ಚುನಾಯಿತ ಅಧ್ಯಕ್ಷ ಡಾ| ಉಲ್ಲಾಸ್ ಶೆಟ್ಟಿ ಕೋಶಾಧಿಕಾರಿ ಡಾ| ಜ್ಯೂಲಿಯನ್ ಸಲ್ದಾನಾ, ವೈದ್ಯಕೀಯ ಶಾಸ್ತ್ರ ತಜ್ಞರ ಸಂಘದ ಅಧ್ಯಕ್ಷ ಡಾ| ಪ್ರಶಾಂತ್, ಕಾರ್ಯದರ್ಶಿ ಡಾ| ಸನ್ಮನ್ ಕೆ.ಎನ್, ಕೋಶಾಧಿಕಾರಿ ಡಾ| ಅನುರಾಗ್ ಜೆ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ| ಪ್ರಕಾಶ್ ಹರಿಶ್ಚಂದ್ರ ವಂದಿಸಿದರು, ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.