ಇರ್ವತ್ತೂರು ಕುಲಾಲ ಸಂಘದ 13ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ

0
56

ಇರ್ವತ್ತೂರು ಕುಲಾಲ ಸಂಘ (ರಿ.) ಇದರ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಇರ್ವತ್ತೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು.

ಕಾರ್ಯಕ್ರಮದ ಆರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ವಿವಿಧ ಕಾರ್ಯಚಟುವಟಿಕೆಗಳು ಹಾಗೂ ಕಾರ್ಯವೈಖರಿಯ ಕುರಿತು ವಿವರಣೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡಬಿದ್ರೆಯ ಎಸ್.ಎನ್.ಎಂ. ಪಾಲಿಟೆಕ್ನಿಕ್‌ನ ನಿವೃತ್ತ ಉಪನ್ಯಾಸಕ ಧವಳಕೀರ್ತಿ ಕುಲಾಲ್ ಅವರು ಮಾತನಾಡಿ, “ಸತ್ಯನಾರಾಯಣ ಪೂಜೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆ ತೋರುತ್ತಿರುವ ಗೌರವ ಶ್ಲಾಘನೀಯ. ಇಂತಹ ಸತ್ಸಂಸ್ಕೃತಿ ಸದಾ ಉಳಿದು, ಸಂಘಟನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಹಾರೈಸಿದರು.

ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಯೋಗೀಶ್ ಕುಲಾಲ್ ಅವರು ಮಾತನಾಡಿ, ಸಂಘದ ಸಕ್ರಿಯ ಬೆಳವಣಿಗೆಯನ್ನು ಮೆಚ್ಚಿಕೊಂಡರಲ್ಲದೆ, “ಮುಂದಿನ ದಿನಗಳಲ್ಲಿ ನಿಮ್ಮದೇ ಸ್ವಂತ ಕಟ್ಟಡದಲ್ಲಿ ವಾರ್ಷಿಕ ಸಭೆ ನಡೆಯುವಂತಾಗಲಿ, ಅದಕ್ಕಾಗಿ ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದು ಭರವಸೆ ವ್ಯಕ್ತಪಡಿಸಿದರು.
ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರಿಶ್ಚಂದ್ರ ಕುಲಾಲ್ ಅವರು ಮಾತನಾಡಿ, “ಕಾರ್ಕಳ ಮತ್ತು ಇರ್ವತ್ತೂರು ಕುಲಾಲ ಸಂಘಗಳ ನಡುವೆ ಅವಿನಾಭಾವ ಬಾಂಧವ್ಯವಿದೆ. ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಉತ್ಸಾಹದಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ” ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ತುಳಸಿ ಕುಲಾಲ್ ಅವರು ಮಾತನಾಡಿ, “ನಗರದಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದ ನನಗೆ ಇಲ್ಲಿನ ಶಾಂತ ಪರಿಸರ ಹಾಗೂ ಸಮಾಜ ಬಾಂಧವರು ತೋರಿದ ಪ್ರೀತಿ-ವಿಶ್ವಾಸ ಅಪಾರ ಸಂತಸ ತಂದಿದೆ” ಎಂದರು.

ಸಭೆಯಲ್ಲಿ ಕಾಂತಾವರ ಕುಲಾಲ ಸಂಘದ ಅಧ್ಯಕ್ಷ ವಿಠಲ ಮೂಲ್ಯ ಬೇಲಾಡಿ, ಕುಲಾಲ ಚಾವಡಿಯ ನಿರ್ವಾಹಕರಾದ ಸಂತೋಷ್ ಕುಲಾಲ್ ಪದವು, ಜ್ಯೋತಿ ಕುಲಾಲ್ ಪದವು, ದೇವಪ್ಪ ಮೂಲ್ಯ, ಹಾಗೂ ಪೆರ್ಡೂರು ಕುಲಾಲ ಸಂಘದ ಪ್ರವೀಣ್ ಕುಲಾಲ್, ಅಶೋಕ್ ಕುಲಾಲ್, ಹರೀಶ್ ಕುಲಾಲ್ ಮತ್ತು ಯಶೋಧ ಕುಲಾಲ್ ಉಪಸ್ಥಿತರಿದ್ದರು.

ಪುನೀತ್ ಕುಲಾಲ್ ಅಬ್ಬಂಜರವರು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಸಂಘ ಅಧ್ಯಕ್ಷರಾದ ಸುರೇಶ್ ಬಂಗೇರ ಪಾಲಾಜೆ ಇವರು ಅಧ್ಯಕ್ಷೀಯ ಭಾಷನ ಮಾಡಿ ಪ್ರಸ್ತುತ ಸಂಘಟನೆಯ ಬಗ್ಗೆ ವಿವರಿಸಿದರು.