1.ಗ್ರಾಮೀಣ ಪ್ರದೇಶದ ಮಕ್ಕಳ ಸಹಜ ಅಭಿನಯದ ಸೊಗಸಿಗೆ
2.ನಿಮ್ಮ ಬಾಲ್ಯದ ಶಾಲಾ ಜೀವನವನ್ನು ಮತ್ತೊಮ್ಮೆ ಮರುಕಳಿಸಿಕೊಂಡು ಸುಖಪಡುವುದಕ್ಕೆ. 3.ಮುಂದಿನ ಪೀಳಿಗೆಯ ಯುವ ನಾಯಕರು ವಿಧಾನಸೌಧದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಮೂಲ ಶಿಕ್ಷಣಕ್ಕೆ.
ನಾವೆಲ್ಲ ಬಾಲ್ಯದಲ್ಲಿ ಪುಟಾಣಿ ಏಜೆಂಟ್ 123, ಸಿಂಹದ ಮರಿ ಸೈನ್ಯ, ಮಕ್ಕಳ ರಾಜ್ಯ ಇಂತಹ ಸಿನಿಮಾಗಳನ್ನು ನೋಡಿ ಬಹುವಾಗಿ ಪ್ರಭಾವಿತರಾದವರು. ಅದರೆ ನಂತರದಲ್ಲಿ ಮಕ್ಕಳ ಚಿತ್ರಗಳು ಹೆಚ್ಚಿನವು ದೊಡ್ಡವರ ಆಲೋಚನೆಗಳು ಚಿಕ್ಕವರ ಬಾಯಲ್ಲಿ ಆಡಿಸಿದ ಬಾಲಿಶ ಮಾತುಗಳ ಚಿತ್ರಗಳು.
ಅನಂತರದಲ್ಲಿ ಸ್ವಲ್ಪ ಭಿನ್ನವಾಗಿ ಬಂದಂತ ಯಶಸ್ವಿ ಮಕ್ಕಳ ಚಿತ್ರ ”ಚಿನ್ನಾರಿ ಮುತ್ತ'” ಮತ್ತು ”ಕೊಟ್ರೇಸಿ ಕನಸು”.
ಆಮೇಲಿನ ವರ್ಷಗಳಲ್ಲಿ ಮಕ್ಕಳ ಚಿತ್ರವೆಂದು ನೆನಪಿಡುವಂತಹ ಚಿತ್ರಗಳೇ ಬಂದಿಲ್ಲವೆನ್ನಬಹುದು.
“ಸ್ಕೂಲ್ ಲೀಡರ್” ಆ ಎಲ್ಲಾ ಕೊರತೆಗಳನ್ನು ನೀಗಿಸಲೆಂದೇ ಬಂದಂತಹ ಚಿತ್ರ ಎಂದರೆ ಅತಿಶಯೋಕ್ತಿಯಲ್ಲ.
”ಈ ಸಾರಿ ಹತ್ತನೇ ಕ್ಲಾಸ್, ಮಂಗನಾಟ ಎಲ್ಲ ನಿಲ್ಲಿಸು ಆಯ್ತಾ!”
ಈ ಮಾತು ಎಲ್ಲರ ಹೈಸ್ಕೂಲು ಜೀವನದ ಆದಿಯಲ್ಲಿ ತಪ್ಪದೇ ಕೇಳಿದ ಮಾತುಗಳು.
ಸಿನಿಮಾ ಆರಂಭವಾಗುವುದೇ ಈ ಗೋಲ್ಡನ್ ವರ್ಡ್ಸಗಳಿಂದ. ಹತ್ತನೆ ಕ್ಲಾಸ್ ಅಂದ್ರೆ ಜೀವನದ ಸ್ವರ್ಗದ ಬಾಗಿಲು ಎಂಬಂತೆ ಹೈಪ್ ಮಾಡಿಕೊಂಡು ಶಾಲೆಗೆ ಮರಳುವ ಯುವ ಬಾಲಕರಲ್ಲಿ ಕಾರಣವಿಲ್ಲದೆಯೇ ಎದೆಯುಬ್ಬಿಸುವ ನಡಿಗೆ. ಬರದ ಮೀಸೆಯನ್ನು ಬಾಚಿಕೊಳ್ಳುವ ಹುಂಬತನದೊಂದಿಗೆ ಶಾಲೆಗೆ ಬರುವ ಮಕ್ಕಳಿಗೆ ಅಧ್ಯಾಪಕರ ಕೊರತೆಯಿಂದ ಶಾಲಾ ಚಟುವಟಿಕೆಗಳನ್ನೇ ನಿಭಾಯಿಸುವ ತಾಪತ್ರಯದಲ್ಲಿರುವ ಮುಖ್ಯ ಉಪಾಧ್ಯಾಯರಿಗೆ ಸಂಬಳದ ಬಗ್ಗೆ ಚಿಂತೆಮಾಡದ, ಸೈನ್ಯಕ್ಕೆ ಸೇರಬೇಕೆಂದು ಪ್ರಯತ್ನಿಸುತ್ತಿದ್ದ ಒಬ್ಬ ಆದರ್ಶವಾದಿ ಅರೆಕಾಲಿಕ ಅಧ್ಯಾಪಕನ ಆಗಮನ ಶಾಲಾ ವಾತಾವರಣದಲ್ಲಿ ಮಕ್ಕಳಿಗೆ ಎಳವೆಯಲ್ಲಿಯೆ ಜವಾಬ್ದಾರಿಯ ನಾಯಕತ್ವದ ಗುಣಬೆಳೆಸಿಕೊಳ್ಳುವ ಅವಕಾಶ ಹುಟ್ಟು ಹಾಕುತ್ತದೆ.
ಇಲ್ಲಿ ಸಿನಿಮಾ ಶಾಲಾ ನಿತ್ಯ ಚಟಿವಟಿಕೆಗಳಿಂದ ಸ್ವಲ್ಪ ವಿಭಿನ್ನತೆಗೆ ವಾಲಿ ರಾಜಕೀಯ ಶೈಲಿಗೆ ಮಕ್ಕಳನ್ನು ಒಳಪಡಿಸಿಕೊಂಡು ಕೊನೆಗೆ ಸಣ್ಣ ಪುಟ್ಟ ತಿರುವುಗಳಿಂದ ಆ ಶಾಲೆಯ ಮುಖ್ಯ ಸಮಸ್ಯೆಗಳನ್ನು ಆ ಮಕ್ಕಳೇ ಸರಿಪಡಿಸಿಕೊಂಡು ಅದಕ್ಕಾಗಿ ಎಲ್ಲರೂ ಒಂದಾಗಿ ಹೆಗಲುಕೊಡುವ ಮುಗ್ಧ ಮನಸ್ಸುಗಳಿಗೆ ಕೊನೆಯಲ್ಲಿ ಸಂಪೂರ್ಣ ಗೆಲುವಾಗುವುದು ಚಿತ್ರದ ಕಥಾ ಹಂದರ.
ಚಿತ್ರದಲ್ಲಿ ತೀರಾ ಆಪ್ತ ಅನ್ನಿಸುವಂತಹ
ಸನ್ನಿವೇಶಗಳು ಹಾದು ಹೋಗುತ್ತವೆ.
ಶಾಲೆ ಮಕ್ಕಳ ಮನಸ್ಸಲ್ಲಿ
“ತಾನೂ ನಿಮ್ಮ ಮುಂದಿನ ಜೀವನದ ಮರೆಯಲಾಗದ ನೆನಪು” ಎಂದು ತನ್ನ ಅಸ್ತಿತ್ವವನ್ನು ಅವರ ಜೊತೆಗೆ ಅಂಟಿಸಿಕೊಳ್ಳುವುದು.
ನಿವೃತ್ತಿಯ( ರಾಘವ ಮೇಸ್ಟ್ರು) ನಂತರವೂ ಮಕ್ಕಳು ದಾರಿಯಲ್ಲಿ ಸಿಗುವಾಗ ಅವರ ಕಲಿಕೆ ಇನ್ನೂ ನನ್ನ ಕರ್ತವ್ಯ ಅನ್ನುವಷ್ಟರ ಮಟ್ಟಿಗೆ ತೋರ್ಪಡಿಸುವ ಆ ಕಾಲದ ಅಧ್ಯಾಪಕರ ಬದ್ದತೆ ಮತ್ತು ಶಾಲೆಯ ಪ್ರತಿ ಮಗುವೂ ತನ್ನದೇ ಎನ್ನುವ ಆಪ್ತ ಮನಸ್ಸಿನ ಮುಖ್ಯೋಪಾಧ್ಯಾಯರ ಕಳಕಳಿ.
ಶಾಲೆಗೆ ನೂರು ಪ್ರತಿ ಶತ ಫಲಿತಾಂಶ ತಂದು ಕೊಟ್ಟು ಶಾಲೆಯ ಮುಖ್ಯ ಸಮಸ್ಯೆಗಳನ್ನು ವಿದ್ಯಾಮಂತ್ರಿಯ ಗಮನಕ್ಕೆ ತಂದು ಅವರನ್ನೇ ಶಾಲೆಯವರೆಗೆ ಕರೆಯಿಸಿ ಮಕ್ಕಳು ತಾವು ಕಲಿತ ಶಾಲೆಗೆ ಅಮೂಲ್ಯ ಸಂಪತ್ತಾಗಿ ನಿರ್ಗಮಿಸುವುದು ಕೂಡಾ ಅತ್ಯಂತ ಹೃದಯ ಸ್ಪರ್ಶಿ.
ಸಂಗೀತ, ಸನ್ನಿವೇಶಗಳನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು, ಹಾಸ್ಯವನ್ನು ಮತ್ತಷ್ಟು ಶಾಲಾ ಮಕ್ಕಳ ಮಕ್ಕಳಾಟಿಕೆಯ ರೂಪದಲ್ಲೇ ತೋರಿಸಬಹುದಿತ್ತು ಎನ್ನುವು ಹಂಬಲ ಕಾಡಿದರೂ ಇತ್ತೀಚಿನ ಕಲುಷಿತ ಸಾಮಾಜಿಕ ವಾತಾವರಣದಲ್ಲಿ ಈ ಸಿನಿಮಾ ಬೆಳೆಯುವ ಮನಸ್ಸುಗಳಿಗೆ ಅತ್ಯಂತ ಪ್ರಸ್ತುತ.
”ನಮ್ಮ ಮಕ್ಕಳಿಗೆ” ಈ ಸಿನಿಮಾವನ್ನು ತೋರಿಸುವ ಪ್ರಯತ್ನವನ್ನು ಪ್ರತಿ ಮನೆಯವರು ಮತ್ತು ಶಾಲೆಯವರು ಮಾಡಿದಾಗ ನಿರ್ದೇಶಕರ, ನಿರ್ಮಾಪಕರ ಕಳಕಳಿಗೆ, ಶ್ರಮಕ್ಕೆ ಒಂದು ಸಾರ್ಥಕತೆ.
ಆ ಪ್ರಯತ್ನವನ್ನು ಜವಾಬ್ದಾರಿಯುತ ನಾಗರಿಕರೆಲ್ಲರೂ ಮಾಡಲೇ ಬೇಕು ಎನ್ನುವುದು ನನ್ನ ಪ್ರೀತಿಯ ಒತ್ತಾಯ.
https://youtu.be/IWOfU0xmQXU
ಶಾಂತಾರಾಮ್ ಶೆಟ್ಟಿ
ಐಲೇಸಾ ದಿ ವಾಯ್ಸ್ ಆಫ್ ಓಶನ್( ರಿ).