ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಸಂತೆಕಟ್ಟೆ-ಪುತ್ತೂರು ವಾರ್ಡಿನ ಸಂತೆಕಟ್ಟೆ ಮಾರ್ಕೆಟ್ ಹಿಂಭಾಗದ ರಸ್ತೆಯ ಬದಿಯಲ್ಲಿ ಹಲವು ತಿಂಗಳುಗಳಿಂದ ರಾಶಿ ರಾಶಿಯಾಗಿ ಬಿದ್ದಿದ್ದ ಕಸ ಮತ್ತು ತ್ಯಾಜ್ಯವನ್ನು ನಗರಸಭೆ ಅಧಿಕಾರಿಗಳು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.
ಸಂತೆಕಟ್ಟೆ ಮಾರ್ಕೆಟ್ ಹಿಂಭಾಗದ ರಸ್ತೆಯಲ್ಲಿ ಕಸ, ಮಾಂಸದ ತ್ಯಾಜ್ಯ ಹಾಗೂ ಇತರ ತ್ಯಾಜ್ಯ ವಸ್ತುಗಳು ರಾಶಿಯಾಗಿ ಬಿದ್ದಿದ್ದರಿಂದ ಪರಿಸರದಲ್ಲಿ ತೀವ್ರ ದುರ್ವಾಸನೆ ಹರಡುತ್ತಿತ್ತು. ಈ ರಸ್ತೆಯ ಮೂಲಕ ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸುತ್ತಿದ್ದು, ಕಸದ ರಾಶಿಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.

ಇದಲ್ಲದೆ, ಕಸದ ರಾಶಿಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಎದುರಾಗಿತ್ತು. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಕೀಳಂಜೆ ಅವರು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಪತ್ರಿಕಾ ವರದಿ ಹಾಗೂ ನಿರಂತರ ಮನವಿಗಳ ಬಳಿಕ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ರಸ್ತೆ ಎರಡೂ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.
ಬಹಳ ತಿಂಗಳುಗಳಿಂದ ಬಾಕಿಯಾಗಿದ್ದ ಸಮಸ್ಯೆ ಅಲ್ಪಾವಧಿಯಲ್ಲೇ ಪರಿಹಾರಗೊಂಡಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು, ಸಾಮಾಜಿಕ ಕಳಕಳಿಯಿಂದ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದ ಸತೀಶ್ ಪೂಜಾರಿ ಕೀಳಂಜೆ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ರಾಮ ಪೂಜಾರಿ ಸಂತೆಕಟ್ಟೆ, ಅರುಣ್ ಸಂತೆಕಟ್ಟೆ ಹಾಗೂ ಚಂದ್ರಕಾಂತ್ ಮೊಗವೀರ್ ಸಂತೆಕಟ್ಟೆ ಅವರು ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಹಾಗೂ ನಗರಸಭೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

