ನಿಡ್ಡಳ್ಳಿ, : ಸಮಾಜ ಸೇವೆಯ ಮೂಲಕ ಜನಮನ ಗೆಲ್ಲುತ್ತಿರುವ ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಸಂಘದ ಸದಸ್ಯರು ಮತ್ತೊಂದು ಮಾದರಿ ಕಾರ್ಯದ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗುಮ್ಮಟೆಗದ್ದೆಯ ಬಡ ಕೂಲಿ ಕಾರ್ಮಿಕ ರುಕ್ಷ್ಮ ಅವರ ಜೀರ್ಣಾವಸ್ಥೆಯಲ್ಲಿದ್ದ ಮನೆಯ ಮೇಲ್ಛಾವಣಿಯನ್ನು ಸ್ವಯಂ ಶ್ರಮದಾನದ ಮೂಲಕ ಸಂಪೂರ್ಣವಾಗಿ ದುರಸ್ತಿ ಮಾಡಿ ನೆರವಿನ ಹಸ್ತ ಚಾಚಿದ್ದಾರೆ.
ಮೇ 29ರಂದು ಆರಂಭವಾದ ಈ ಕಾರ್ಯ ಮೂರು ದಿನಗಳ ಕಾಲ ನಿರಂತರವಾಗಿ ನಡೆಯಿತು. ಸಂಘದ ಎಲ್ಲಾ ಸದಸ್ಯರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂಸೇವಕರಾಗಿ ದುಡಿದು ಮನೆಯ ಮೇಲ್ಛಾವಣಿ ದುರಸ್ತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರಿಂದ ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಸೇವಾ ಕಾರ್ಯಕ್ಕೆ ಊರಿನ ಹಿರಿಯರು ಹಾಗೂ ದಾನಿಗಳಾದ ರವೀಂದ್ರ ಶೆಟ್ಟಿ ನುಳಿಯಾಲು, ಮಹೇಶ್ ಪ್ರಸಾದ್ ಭಟ್, ಪ್ರಕಾಶ್ ರೈ ಬೈಲಾಡಿ, ಮುರಳಿ ಭಟ್ ದೆಯ್ಯಾರಡ್ಕ, ಶ್ಯಾಮ್ ಜೀತ್ ರೈ ಪಾಪನಡ್ಕ ಹಾಗೂ ಸದಾಶಿವ ಅವರು ಆರ್ಥಿಕ ಸಹಕಾರ ನೀಡಿದ್ದು, ಅವರ ನೆರವಿನಿಂದ ಕಾರ್ಯ ಯಶಸ್ವಿಯಾಗಿ ನೆರವೇರಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಮಾಜದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಮೂಲಕ ಯುವಕರು ಮಾದರಿ ಸಮಾಜ ನಿರ್ಮಾಣಕ್ಕೆ ಕೈಜೋಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

