ಕರುನಾಡಿನ ಸಾಹಿತ್ಯ ಲೋಕದಲ್ಲಿ ಮಿರ ಮಿರ ಮಿಂಚಿದ ದಿಗ್ಗಜರು ಆದ ಮೇರು ಸಾಹಿತಿಗಳಾದ ಪುಸ್ತಕಗಳ ಮೂಲಕ ರಸಸ್ವಾದವನ್ನು ಪಡೆಯುವ ಒಂದು ಸಂಸ್ಕೃತಿಯ ಸಾಕಾರವಾಗಿದ್ದ ಎಸ್. ಎಲ್. ಭೈರಪ್ಪನವರ ಕುರಿತು ಸ್ವಲ್ಪ ಮಟ್ಟಿಗೆ ತಿಳಿಯೋಣ.ಡಾ. ಎಸ್ ಎಲ್ ಬೈರಪ್ಪನವರು ಹಾಸನ ಜಿಲ್ಲೆಯ ಚಾಮರಾಜನಗರ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದರು ಅವರ ಪೂರ್ಣ ಹೆಸರು ಸಂತೇಶಿವರ ಲಿಂಗಣ್ಣ ಭೈರಪ್ಪ.
ಭೈರಪ್ಪನವರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸಾಹಿತಿ. ವಿಶ್ವದ ಹಲವು ಭಾಷೆಗಳಿಗೆ ಅವರ ಕಾದಂಬರಿ ಅನುವಾದ ಗೊಂಡಿದೆ. ಅವರ ಕಾದಂಬರಿಗಳು ಸಿನಿಮಾ ಕೂಡ ಆಗಿವೆ. ಸಂಸ್ಕೃತಿ ಎತ್ತಿ ಹಿಡಿದು ಸಮಾಜಕ್ಕೆ ಮಾರ್ಗದರ್ಶನ ಮಾಡಿದವರು ಭೈರಪ್ಪನವರು.
ಸಾಹಿತಿ ಎಸ್ ಎಲ್ ಭೈರಪ್ಪನವರು ಬಾಲ್ಯದಲ್ಲೇ ಕಡು ಕಷ್ಟದ ಜೀವನ ಕಂಡವರು. ಒಪ್ಪೊತ್ತಿನ ಊಟ ಮತ್ತು ಶಿಕ್ಷಣಕ್ಕೆ ಯಾರ ನೆರವು ಇಲ್ಲದಂತಹ ಪರಿಸ್ಥಿತಿ. .ವಿದ್ಯಾರ್ಥಿಯಾಗಿದ್ದಾಗ ಸಿಗರೇಟು ಸೇದುತ್ತಿದ್ದರು, ನಶೆ ಹಾಕುತ್ತಿದ್ದರು. ಶಿಕ್ಷಕರು ಬುದ್ಧಿವಾದ ಹೇಳಿದ್ದರಿಂದ ಆ ಚಟಗಳಿಂದ ಹೊರಬಂದೆ ಎಂದು ಕಾದಂಬರಿ ಕಾರ ಎಸ್ .ಎಲ್ .ಭೈರಪ್ಪನವರು ಹೇಳಿಕೊಂಡಿದ್ದರು. ಭೈರಪ್ಪನವರ ಈ ಗುಣದಿಂದ ತಿದ್ದುವವರಿದ್ದರೆ ಯಾರೂ ಕೂಡ ಕೆಟ್ಟ ಚಟಗಳಿಂದ ದೂರ ಸರಿಯಬಹುದು ಎಂದು ತಿಳಿಯುತ್ತದೆ.
ಅವರು ವಂಶವೃಕ್ಷ , ಪರ್ವ, ಸಾರ್ಥ, ಆವರಣ ಸೇರಿದಂತೆ 26 ಕಾದಂಬರಿಗಳನ್ನು ಬರೆದಿದ್ದಾರೆ. ಅವರು ಮಹಾಭಾರತದಿಂದ ಪ್ರೇರಣೆಗೊಂಡು ‘ಪರ್ವ’ ಕಾದಂಬರಿಯನ್ನು ಬರೆದರು.ವಿನೋದವಿರಲಿ, ವಿಚಾರವಿರಲಿ ಯಾವುದರಲ್ಲಿಯೂ ಭೈರಪ್ಪನವರಿಗೆ ಅವಸರವಿರಲಿಲ್ಲ ಆತುರವಿರಲಿಲ್ಲ ಇದನ್ನು ಅವರ ಬರಹಗಳೇ ತಿಳಿಸುತ್ತದೆ.
ಅವರು ತಾವು ದುಡಿದ ಹಣವನ್ನು ಸಮಾಜಕ್ಕಾಗಿ ತನ್ನ ಊರಿನ ಅಭಿವೃದ್ಧಿಗಾಗಿ ಖರ್ಚು ಮಾಡಲು ಚಿಂತನೆ ಮಾಡಿದ್ದರು. ಅವರು ನಿತ್ಯದ ಖರ್ಚಿಗಾಗಿ ತಿಂಗಳಿಗೆ 5 ರೂಪಾಯಿ ಸಂಬಳದ ಮೇಲೆ ಸಿನಿಮಾ ಟಾಕೀಸ್ ಗೇಟ್ ಕೀಪರ್ ಆಗಿ ಕೆಲಸ ಮಾಡಿದ್ದರು. ಹೋಟೆಲ್ ನಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದರು. ಅವರು ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿ
ಕಾದಂಬರಿಕಾರನಾಗಿ ಪ್ರಸಿದ್ಧಿ ಪಡೆದರು. ಅವರ ಜೀವನದಲ್ಲಿ 9 ದಶಕಗಳನ್ನು ಕಳೆದಿದ್ದರು. ಅವರು 94 ವರ್ಷಗಳ ಕಾಲ ಬದುಕಲು ಅವರಿಗೆ ದುಶ್ಚಟಗಳು ಇಲ್ಲದಿರುವುದೇ ಕಾರಣ. ಪ್ರೌಢಶಾಲಾ ಮಕ್ಕಳಿಗೆ ಏನು ಆಸಕ್ತಿ ಬೆಳೆಸುತ್ತೇವೆ ಎನ್ನುವುದು ಬಹಳ ಮುಖ್ಯ. ಸಾಹಿತ್ಯದ ರಸ ಅನುಭವಿಸುವುದು ಪ್ರೌಢಶಾಲಾ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು. ನಮ್ಮ ಜೀವನವು ಬರೆ ಕಥೆಯಾಗದೆ ಜೀವನದ ಮೌಲ್ಯಗಳು ಅರ್ಥಮಾಡಿಕೊಳ್ಳುವ ಜ್ಞಾನ, ಮೌಲ್ಯಗಳು ಯಾವುವು ಎಂಬುದನ್ನು ತಿಳಿಯಬೇಕು ಎಂದು ಹೇಳಿದ್ದರು.
2004ರಲ್ಲಿ ಎಸ್. ಎಲ್ .ಭೈರಪ್ಪನವರಿಗೆ ನಿರಂಜನ ಪ್ರಶಸ್ತಿ ಘೋಷಿಸಲಾಗಿತ್ತು. ಅವರಿಗೆ ಪುತ್ತೂರಿನಲ್ಲಿ ಶಿವರಾಮ ಪ್ರಶಸ್ತಿಯೊಂದಿಗೆ 10,000 ನಗದು ಬಹುಮಾನ ದೊರೆತಿತ್ತು. ಅದನ್ನು ಅವರು ಹಿರಿಯ ಸಾಹಿತಿ ಕೀರ್ತಿ ಶೇಷ ಶಿವರಾಮು ಅವರ ಪತ್ನಿ ಶಾರದಾ ರವರ ಕಷ್ಟಕ್ಕೆ ನೆರವಾಗಲೆಂದು ಆ ಮೊತ್ತವನ್ನು ದಾನ ಮಾಡಿದರು.ಡಾ. ಎಚ್. ಜಿ. ಶ್ರೀಧರ್ ಎಂಬವರಲ್ಲಿ ಈ ವಿಷಯವನ್ನು ಯಾರಿಗೂ ಮತ್ತು ಈ ವಿಷಯ ಎಲ್ಲೂ ಹೊರಬರದಂತೆ ನೋಡಿಕೊಳ್ಳಬೇಕು ಎಂದರು. ಶ್ರೀಧರರವರು ಈ ವಿಷಯವನ್ನು ಯಾರಿಗೂ ಹೇಳದೇ ಭೈರಪ್ಪನವರು ವಿಧಿವಶರಾದ ನಂತರ ಈ ವಿಷಯವನ್ನು ಹೇಳಿದರು.
ಹಣಕ್ಕಾಗಿ ಯಾವುದೇ ಸಾಲುಗಳನ್ನು ಭೈರಪ್ಪನವರು ಬರೆದಿಲ್ಲ. ಅವರಲ್ಲಿದ್ದ ಮೌಲ್ಯ ಪ್ರಜ್ಞೆ, ಬಾಧ್ಯತೆಯುಳ್ಳ ಪ್ರಜೆಯ ಮಟ್ಟಿಗೆ ರಾಷ್ಟ್ರಭಕ್ತಿ, ವ್ಯಕ್ತಿಯ ಮಟ್ಟಿಗೆ ಪ್ರೀತಿ, ಸ್ನೇಹ, ವಾತ್ಸಲ್ಯ ಇವುಗಳಿಲ್ಲದೆ ಇದ್ದಲ್ಲಿ ಅವರ ಬರಹಕ್ಕಾಗಲಿ, ಬದುಕಿಗಾಗಲಿ ದೊಡ್ಡಬೆಲೆ ಬರುತ್ತಿರಲಿಲ್ಲ.
ಅವರ ಕೊನೆ ಆಸೆ ತಮ್ಮ ಹುಟ್ಟೂರಾದ ಸಂತೇಶಿವರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ 25 ಕೋಟಿ ರೂಪಾಯಿ ಮನವಿ ಮಾಡಿದ್ದರು.ಭೈರಪ್ಪನವರ ಆಸೆಯಂತೆ ಯೋಜನೆ ಪೂರ್ಣಗೊಂಡು ಕೆರೆಗೆ ನೀರು ಬಂದಿದ್ದು ನೀರಿನ ಸಮಸ್ಯೆಗೆ ಶಾಶ್ವತ ಯೋಜನೆಯನ್ನು ಮಾಡಿದ್ದಾರೆ. ಕೆರೆ ತುಂಬಿದ ಬಳಿಕ ಭೈರಪ್ಪನವರು ತಮ್ಮ ಊರಿಗೆ ಹೋಗಿ ಕೆರೆಯ ನೀರಿನ ಮೇಲೆ ದೋಣಿ ವಿಹಾರವನ್ನು ಮಾಡಿ, ತಮ್ಮ ಕನಸನ್ನು ಈಡೇರಿಸಿಕೊಂಡಿದ್ದರು.
ಅವರಿಗೆ ಪದ್ಮಭೂಷಣ, ಪದ್ಮಶ್ರೀ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಫಿಲೋಶಿಪ್ ಎಂಬಂತಹ ಪ್ರಶಸ್ತಿಗಳು ದೊರೆತಿದೆ. ಅವರನ್ನು ಸರಸ್ವತಿ ಪುತ್ರ ಎಂದು ಕರೆಯುತ್ತಾರೆ.
ಇಂತಹ ಮಾರ್ಗದರ್ಶಕರು ಮಹನೀಯರು ಆದ ನಮ್ಮೊಳಗೆ ಸದಾ ಬಾಳುವ ಭೈರಪ್ಪನವರನ್ನು ನೆನೆಯುತ್ತಾ ಮತ್ತೊಮ್ಮೆ ಅವರ ಸಾಹಿತ್ಯ ಲೋಕದ ಜೀವನದ ಕೆಲವೊಂದು ಮಜಲುಗಳನ್ನು ಮೆಲುಕು ಹಾಕಬಹುದು.ಡಾ. ಎಸ್. ಎಲ್. ಭೈರಪ್ಪನವರು 24/ 9/2025 ರಂದು ವಿಧಿವಶರಾದರು. ಭೈರಪ್ಪನವರ ಅಗಲುವಿಕೆಯು ಕನ್ನಡ ಸಾಹಿತ್ಯ ಮಾತ್ರವಲ್ಲ, ಭಾರತೀಯ ಸಾಹಿತ್ಯದ ಒಂದು ಯುಗವೇ ಸರಿದು ಹೋಗಿದೆ ಎಂದರೆ ತಪ್ಪಾಗಲಾರದು. ಈ ಎಲ್ಲಾ ವಿಚಾರಧಾರೆಗಳನ್ನು ನಾನು ಓದಿನ ಮೂಲಕ ತಿಳಿದುಕೊಂಡೆ.
ಮಣಿ ಮುಂಡಾಜೆ
10ನೇ ತರಗತಿಸರಕಾರಿ ಜೂನಿಯರ್ ಕಾಲೇಜು ಕೊಂಬೆಟ್ಟು

