ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ‌

0
9

ಕಾರ್ಕಳದಲ್ಲಿ ‘ಮಹಾಭಾರತ ಭಾವದೀಪ’ ಉಪನ್ಯಾಸಮಾಲೆಯ 9ನೇ ಸೋಪಾನ

ಕಾರ್ಕಳ, : ಜೀವನದಲ್ಲಿ ಸೋಲು-ಗೆಲುವು ಎದುರಾದಾಗ ಧೃತಿಗೆಡದೆ, ಅವುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಮುನ್ನಡೆದರೆ ಸಮಾಜ ನಮ್ಮನ್ನು ಗೌರವಿಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಸಂದೇಶವನ್ನು ಮಹಾಭಾರತ ನೀಡುತ್ತದೆ ಎಂದು ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು.

ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕದ ಸಹಭಾಗಿತ್ವದಲ್ಲಿ ವರ್ಷಪೂರ್ತಿ ನಡೆಯುತ್ತಿರುವ ‘ಮಹಾಭಾರತ ಭಾವದೀಪ’ ಉಪನ್ಯಾಸಮಾಲೆಯ 9ನೇ ಸೋಪಾನದಲ್ಲಿ ಅವರು ‘ವನದಲ್ಲಿ ಪಾಂಡವರು’ ವಿಷಯದ ಕುರಿತು ಉಪನ್ಯಾಸ ನೀಡಿದರು. ಸೆ.26ರಂದು ಕಾರ್ಕಳದ ಪ್ರಕಾಶ್ ಹೋಟೆಲ್‌ನ ‘ಸಂಭ್ರಮ’ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.

ಪಾಂಡವರು ಅನೇಕ ಅಡೆತಡೆಗಳನ್ನು ಹಾಗೂ ಕೌರವರ ಕಡೆಯಿಂದ ವಿವಿಧ ರೀತಿಯ ಅವಮಾನ ಮತ್ತು ಕಿರುಕುಳಗಳನ್ನು ಎದುರಿಸಿದರೂ ಧರ್ಮದ ಮಾರ್ಗವನ್ನು ಬಿಡಲಿಲ್ಲ. ವನವಾಸ ಹಾಗೂ ಅಜ್ಞಾತವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅವರು ದೈವಾನುಗ್ರಹ, ಹನುಮಂತನ ಭೇಟಿ, ದೇವಲೋಕದ ಇಂದ್ರಾದಿಗಳ ಅನುಗ್ರಹ ಹಾಗೂ ಋಷಿಮುನಿಗಳ ಆಶೀರ್ವಾದದಿಂದ ವಿಶೇಷ ಶಕ್ತಿ ಮತ್ತು ಶಸ್ತ್ರಾಸ್ತ್ರಗಳನ್ನು ಸಂಪಾದಿಸಿಕೊಂಡರು. ಮುಂದೆ ಇದೇ ಶಕ್ತಿ ದುಷ್ಟರ ದಮನಕ್ಕೆ ನೆರವಾಗಿ ಅವರ ಗೆಲುವಿಗೆ ಕಾರಣವಾಯಿತು ಎಂದು ಡಾ. ವಿನಾಯಕ ಭಟ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ ಹಾಗೂ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮನಾ ಜಗದೀಶ್ ಪ್ರಾರ್ಥಿಸಿದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಸುಲೋಚನಾ ಬಿ.ವಿ. ವಂದಿಸಿದರು.