ವೃತ್ತಿ ರಂಗಭೂಮಿ ಉಳಿದು- ಬೆಳೆಯಲು ಪ್ರೋತ್ಸಾಹ ಅಗತ್ಯ!

0
8

ದಾವಣಗೆರೆ : ರಂಗಭೂಮಿ ಉಳಿದರೆ ಭಾಷೆ, ಸಂಸ್ಕೃತಿ, ಕಲಾವಿದರ ಬದುಕು ಉಳಿಯಲು ಸಾಧ್ಯ, ಆ ನಿಟ್ಟಿನಲ್ಲಿ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ, ಟಿ.ವಿ., ಮೊಬೈಲ್ ಗಳ ಹಾವಳಿಯಲ್ಲೂ ಸ್ಪರ್ಧಾತ್ಮಕವಾಗಿ, ನಾಟಕ ಪ್ರದರ್ಶನಗಳ ಮೂಲಕ ಕಮತಗಿ ಕಂಪನಿಯವರು, ಮೌಲ್ಯಯುತ ನಾಟಕ ಗಳಿಂದ ಜನರ ಮನಸ್ಸನ್ನು ಸೆಳೆಯುತ್ತಿರುವುದು, ಅಭಿಮಾನದ ಸಂಗತಿಯಾಗಿದೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ತಿಳಿಸಿದರು.

ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದವರು, ನಗರದ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿಯವರ ಥಿಯೇಟರ್ ನಲ್ಲಿ, ಭಾನುವಾರ ಆಯೋಜಿಸಿದ್ದ “ರಂಗದಂಗಳದಲ್ಲಿ ತಿಂಗಳ ಪ್ರತಿಭೆ” ರಂಗಭೂಮಿಯ ನಟ, ನಿರ್ದೇಶಕ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರೂ ಆದ ಬಿ. ಕುಮಾರಸ್ವಾಮಿ ಅವರೊಂದಿಗೆ, ಸಂಧರ್ಶನ, ಸಂವಾದ, ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ನಗರದಲ್ಲಿ ಕ್ಯಾಂಪ್ ಮಾಡಿದ್ದ ಬಹುತೇಕ ಎಲ್ಲ ಕಂಪನಿಗಳು, ಸಾಕಷ್ಟು ಆರ್ಥಿಕವಾಗಿ ಅನುಕೂಲ ಪಡೆದುಕೊಂಡು ಹೋಗಿವೆ, ರಂಗಭೂಮಿ ಕಲಾವಿದರಿಗೆ ಶಾಮನೂರು ಶಿವಶಂಕರಪ್ಪ ಹಾಗೂ ಎಸ್ . ಎಸ್. ಮಲ್ಲಿಕಾರ್ಜುನ್ ರವರು ಶಾಸಕರು, ಸಚಿವರಾಗಿದ್ದಾಗ, ಕಲಾವಿದರಿಗೆ ಆಶ್ರಯ ಮನೆಗಳನ್ನು ಕೊಟ್ಟಿದ್ದಾರೆ. ಸಹಾಯ-ಸಹಕಾರ ನೀಡಿದ್ದಾರೆ, ಅಲ್ಲದೇ ಈಗ ಬಾತಿ ಬಳಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 200 ಎಕರೆ ಜಮೀನು ಖರೀದಿ ಮಾಡಲಾಗಿದ್ದು, ಅದನ್ನು ಪ್ರಾಧಿಕಾರದಿಂದ ಲೇ-ಔಟ್ ಮಾಡಿ, ಅದರಲ್ಲಿ 100 ನಿವೇಶನಗಳನ್ನು ಕಲಾವಿದರಿಗೆ, ಅಂಗವಿಕಲರಿಗೆ, ಇನ್ನಿತರರಿಗೆ ವಿತರಿಸಲು ಸಚಿವ ಮಲ್ಲಿಕಾರ್ಜುನ್ ರವರು ತೀರ್ಮಾನಿಸಿದ್ದಾರೆ, ಆಗ ನಿವೇಶನ ರಹಿತ ಕಲಾವಿದರು ಅರ್ಜಿ ಸಲ್ಲಿಸಿ ಪಡೆಯಬಹುದು ಎಂದು ತಿಳಿಸಿದರು.

ಕಲಾವಿದರಿಗೆ ಜೀವಸೆಲೆಯಾದ ದಾವಣಗೆರೆ, ವೃತ್ತಿ ರಂಗಭೂಮಿಗೆ ಅನನ್ಯ ಕೊಡುಗೆ ನೀಡಿದೆ, ಕೆ.ಬಿ.ಆರ್. ಡ್ರಾಮಾ ಕಂಪನಿಯು ಶತಮಾನೋತ್ಸವದ ಅಂಚಿನಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು, ಕೆ.ಬಿ.ಆರ್. ಡ್ರಾಮಾ ಕಂಪನಿಯ ಮಾಲೀಕ ಸಿ.ಎಲ್. ಚಂದ್ರಧರ್ ಹೇಳಿದರು, ರಂಗಭೂಮಿ ಹಾಗೂ ಚಲನಚಿತ್ರ ನಟಿ ಪಂಕಜ ರವರು ಮಾತನಾಡಿ, ರಂಗಭೂಮಿ ಕಲಾವಿದರು ಪ್ರಶಸ್ತಿ-ಪುರಸ್ಕಾರಗಳಿಗೆ ಅರ್ಜಿ ಹಾಕಿ ಪಡೆಯದೇ ಸರಕಾರವೇ ಗುರುತಿಸಿ ಕೊಡುವಂತಾಗಬೇಕು, ಸರ್ಕಾರ ರಂಗಭೂಮಿ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ನೀಡುವಂತಾಗಬೇಕೆಂದು ಕಳಕಳಿ ವ್ಯಕ್ತಪಡಿಸಿದರು. ನಾಟಕಗಳು ಹೃದಯವನ್ನು ಅರಳಿಸಿ, ಬದುಕಿಗೆ ಮೌಲ್ಯವನ್ನು ತಂದು ಕೊಡುವುದಲ್ಲದೇ, ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸಂಧೇಶದ ಮೂಲಕ ಪರಿಹಾರ ಕಲ್ಪಿಸುತ್ತದೆ ಎಂದು, ದಾವಣಗೆರೆ ಜಿಲ್ಲಾ ಮಹಿಳಾ ಹಕ್ಕು ಸಮಿತಿ ಅಧ್ಯಕ್ಷೆ ಶ್ರೀಮತಿ ಡಿ. ಎಂ. ಕಲ್ಪನಾರಾಜ್ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವಿ ರವಿಚಂದ್ರ, ಹಿರೇಕೋಗಲೂರು ಉಪನ್ಯಾಸಕರಾದ ಡಾ. ಸೈಯದ್ ಕೋಗಲೂರು, ಹಿರಿಯ ರಂಗಭೂಮಿ ಕಲಾವಿದ ಭುಜಂಗ ನಾಯಕ ಶಿರ್ಸಿ ಇವರು ಮಾತನಾಡಿದರು. ಇದೇ ಸಂದರ್ಭದಲ್ಲಿ ರಂಗಭೂಮಿ ಹಿರಿಯ ಕಲಾವಿದೆಯರಾದ, ಶ್ರೀಮತಿ ಕನಕಲಕ್ಷ್ಮಿ ಪಾಪು ಕೊಲ್ಲೂರ, ಜಿ. ಮಂಜುಳಮ್ಮ , ಕೆ. ಸರೋಜಮ್ಮ , ಹರಿಹರದ ಶಿವಯೋಗಿ ರಾಜು ಹಾಗೂ ಚಿತ್ರದುರ್ಗದ ಬಿ. ಕುಮಾರಸ್ವಾಮಿ ಇವರನ್ನು ಸಂಘದವತಿಯಿAದ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷರಾದ ಮಹೇಶ್ವರಪ್ಪ ದೊಡ್ಡಮನಿ ಯವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ನಂತರ ಹಿರಿಯ ಕಲಾವಿದ ಬಿ.ಕುಮಾರಸ್ವಾಮಿಯವರೊಂದಿಗೆ, ಶ್ರೀಮತಿ ಕನಕಲಕ್ಷ್ಮಿ ಹಾಗೂ ಕೆ. ಕೊಟ್ರೇಶ್ ಅವರು ಸಂವಾದ, ಸಂಧರ್ಶನ ಕಾರ್ಯಕ್ರಮ ನಡೆಸಿಕೊಟ್ಟರು. ಬಿ. ಸುಧಾಮಣಿ ಅವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕನಕಲಕ್ಷ್ಮಿಯವರು ಅಚ್ಚುಕಟ್ಟಾಗಿ ನಿರ್ವಹಿಸಿದರು.