ವಿದ್ಯಾರ್ಥಿಗಳನ್ನು ಸಾಮರ ಇಂಟರ್ ಇಸ್ಲಾಮಿಕ್ ನ್ಯಾಷನಲ್ ಶಾಲೆಗೆ ಸೇರ್ಪಡೆ ಮಾಡದಂತೆ ಶಾಲೆ ಮುಂಭಾಗ ನೋಟೀಸ್ ಅಂಟಿಸಿದ ಶಾಲಾ ಶಿಕ್ಷಣ ಇಲಾಖೆ

0
7

ಬೆಂಗಳೂರು; ಧಣಿಸಂದ್ರದ ಸಾಮರ ಇಂಟರ್ ಇಸ್ಲಾಮಿಕ್ ನ್ಯಾಷನಲ್ ಸ್ಕೂಲ್ ಗೆ ಮಾನ್ಯತೆ ರದ್ದಾಗಿರುವ ಕಾರಣ ಶಾಲೆಯನ್ನು ಮುಚ್ಚಿದ್ದು, ಸದರಿ ಶಾಲೆಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯುಕ್ತವಾಗಿ ಶಾಲಾ ಮುಂಭಾಗ ನೋಟಿಸ್ ಅಂಟಿಸಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು, ಈ ಮೂಲಕ ಶಾಲೆ ಮಚ್ಚಿರುವುದನ್ನು ಸಾರ್ವಜನಿಕವಾಗಿ ಪ್ರಕಟಿಸಿ ಕೊನೆಗೂ ಅಂತಿಮ ಮುದ್ರೆ ಒತ್ತಿದೆ.
ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರ ಸೂಚನೆ ಮೇರೆಗೆ ಈ ವರ್ಷದ ಏಪ್ರಿಲ್ 10 ರಂದು ಹೊರಡಿಸಿದ ಆದೇಶ ಹಾಗೂ 2025 ರ ಮೇ 30 ರಂದು ಹೈಕೋರ್ಟ್ ಆದೇಶ ಸೇರಿ ವಿವಿಧ ತೀರ್ಪುಗಳು, ಸುತ್ತೋಲೆ, ಆದೇಶಗಳನ್ನು ಉಲ್ಲೇಖಿಸಿ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಿದೆ.

ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆಯ 1 ರಿಂದ 10ನೆಯ ತರಗತಿಗಳ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್-39 ರಂತೆ ಹಿಂಪಡೆದು ಸೆಕ್ಷನ್-34 ರಂತೆ ನೋಂದಣಿಯನ್ನು ರದ್ದುಪಡಿಸಿದೆ. ಈ ಕಾರಣದಿಂದ ಸದರಿ ಶಾಲೆಯನ್ನು ಇಲಾಖೆಯು ಮುಚ್ಚಿಸಿದ್ದು ಮಕ್ಕಳನ್ನು 2026-27ರ ಸಾಲಿಗೆ ದಾಖಲು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ.

ಮೇ ತಿಂಗಳ 13 ರಂದು ಶಾಲಾ ಶಿಕ್ಷಣ ಇಲಾಖೆ ಅಂತಿಮ ಆದೇಶ ಹೊರಡಿಸಿತ್ತು. ಅದರಂತೆ ದಾಖಲಾತಿ ಮಾಡಿಕೊಳ್ಳದಂತೆ ಆಡಳಿತ ಮಂಡಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಆನ್ ಲೈಮ್ ಮೂಲಕ ವರ್ಗಾವಣೆಗೊಳ್ಳುವ ಶಾಲೆಗಳಿಗೆ ವರ್ಗಾವಣೆ ಮಾಡಬೇಕು. ಈ ಕುರಿತ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಒದಗಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿದ್ದರು.

ಶಿಕ್ಷಣ ಇಲಾಖೆಯ ಆದೇಶದನ್ವಯ ಮೇ 13 ರಂದು ಪೊಲೀಸ್ ಬಂದೋಬಸ್ತ್ ಮೂಲಕ ದೊಡ್ಡ ಮಟ್ಟದಲ್ಲಿ ಪೋಷಕರ ಸಭೆ ನಡೆಸಿ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ತಿಳಿವಳಿಕೆ ನೀಡಲಾಗಿತ್ತು. ವಿದ್ಯಾರ್ಥಿಗಳ ಮುಂದಿನ ಹಂತದ ಶಿಕ್ಷಣಕ್ಕೆ ಧಕ್ಕೆಯಾಗದಂತೆ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಸಾಮರ ಇಂಟರ್ ಇಸ್ಲಾಮಿಕ್ ನ್ಯಾಷನಲ್ ಶಾಲೆ ಹಲವು ನಕಲಿ ಹೆಸರುಗಳಿಂದ ನಡೆಯುತ್ತಿತ್ತು. ಜಾಮಿಯಾ ಮುಹಮ್ಮದಿಯಾ ಮನ್ಸೂರ ಮದರಸಾ-ಮುಂಬೈ, ಅಲ್-ಜಾಮಿಯಾ ಮುಹಮ್ಮದಿಯಾ ಎಜುಕೇಶನ್ ಸೊಸೈಟಿ – ಮುಂಬೈ, ಜಾಮಿಯಾ ಮುಹಮ್ಮದಿಯಾ ಎಜುಕೇಶನ್ ಸೊಸೈಟಿ ಮುಂಬೈ, ಅಲ್-ಜಾಮಿಯಾ ಮುಹಮ್ಮದಿಯಾ ಮನ್ಸೂರ ಎಜುಕೇಶನ್ ಸೊಸೈಟಿ – ಮುಂಬೈ ಹಾಗೂ ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್-ಮುಂಬೈ ಎಂಬ ಹೆಸರುಗಳಿಂದ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವುದಾಗಿ ಆಡಳಿತ ಮಂಡಳಿ ಹೇಳಿತ್ತು. ಹೈಕೋರ್ಟ್ ಮತ್ತು ಶಿಕ್ಷಣ ಇಲಾಖೆಯು ಘೋಷಿಸಿದಂತೆ ಮೇಲೆ ತಿಳಿಸಲಾದ ಸಂಘಗಳು ಕಾನೂನುಬಾಹಿರವಾಗಿವೆ.

LEAVE A REPLY

Please enter your comment!
Please enter your name here