ಸೆ.1ರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರಾರಂಭಗೊಂಡಿರುವ ಜನಪರ ‘ಬೃಹತ್ ಪಾದಯಾತ್ರೆ’ಗೆ ನಿಗದಿತ ದಿನಾಂಕ ಸೆ.9ರಂದು ಉಡುಪಿ ಜಿಲ್ಲೆಯಿಂದ ಸಾವಿರಾರು ಮಂದಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ಪ್ರಸಕ್ತ ಹಗರಣದಿಂದ ಲೂಟಿಯಾಗಿರುವ ಸಂಪೂರ್ಣ ಹಣ ವಾಲ್ಮೀಕಿ ನಿಗಮಕ್ಕೆ ವಾಪಾಸಾಗಬೇಕು, ಸ್ಥಗಿತಗೊಂಡಿರುವ ಪರಿಶಿಷ್ಟ ಕಲ್ಯಾಣದ ಕಾರ್ಯಗಳು ಶೀಘ್ರ ಆರಂಭವಾಗಬೇಕು, ಬರಗಾಲದ ಬೇಗೆಯಿಂದ ಕಂಗಾಲಾಗಿರುವ ರೈತರ ಸಮಸ್ಯೆಯನ್ನು ಆಲಿಸಿ ಸರಕಾರ ನೆರವು ಒದಗಿಸಬೇಕು, ಬರದ ಬವಣೆಗೆ ಸಿಲುಕಿರುವ ಪ್ರದೇಶಗಳನ್ನು ಗುರುತಿಸಿ ‘ಬರ ಪೀಡಿತ ಪ್ರದೇಶ’ ಎಂದು ಘೋಷಣೆ ಮಾಡಿ ಪರಿಹಾರ ಒದಗಿಸಬೇಕು, ನಿರುದ್ಯೋಗಿ ಯುವ ಜನತೆಗೆ 2.50 ಲಕ್ಷ ನೇಮಕಾತಿಗೆ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಬೇಕು ಎಂಬ ಪ್ರಮುಖ ಬೇಡಿಕೆಗಳ ಜೊತೆಗೆ ಕೆ.ಪಿ.ಎಸ್.ಸಿ ನಡೆಸಿದ ಪಶು ವೈದ್ಯಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಿನ್ನಲೆಯ ಕರ್ಮಕಾಂಡ, ನೇಮಕಾತಿ ಪ್ರಕ್ರಿಯೆಯ ನೂರಾರು ಕೋಟಿಯ ಭ್ರಷ್ಟಾಚಾರ ಸಹಿತ ಪಂಚ ಗ್ಯಾರಂಟಿಗಳಿಗೆ ಇತಿಶ್ರೀ ಹಾಡಲು ಕುಂಟು ನೆಪಗಳ ಮಾರ್ಗಗಳನ್ನು ಅನುಸರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ನಡೆಯುತ್ತಿರುವ ಈ ಬೃಹತ್ ಪಾದಯಾತ್ರೆಯ ಆಂಧೋಲನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಸೆ.9ರಂದು ಬೆಳಿಗ್ಗೆ ಬಳ್ಳಾರಿ – ಕುಡಿತಿನಿ ರಾಮೇಶ್ವರ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಹೊರಡಲಿರುವ 9ನೇ ದಿನದ ‘ಬೃಹತ್ ಪಾದಯಾತ್ರೆ’ಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ ಗ್ರಾಮಾಂತರ, ಉಡುಪಿ ನಗರ, ಕಾಪು ಮತ್ತು ಕಾರ್ಕಳ ಮಂಡಲಗಳ ವ್ಯಾಪ್ತಿಯಿಂದ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಮಟ್ಟದ ಪದಾಧಿಕಾರಿಗಳು, ಸಮಿತಿ ಹಾಗೂ ಕಾರ್ಯಕಾರಿಣಿ ಸದಸ್ಯರು ಮತ್ತು ಕಾರ್ಯಕರ್ತ ಬಂಧುಗಳು ಸಕ್ರಿಯವಾಗಿ ಭಾಗವಹಿಸಿ, ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ಕರೆ ನೀಡಿದ್ದಾರೆ.

