ಸುಧಾರಿತ ಕೋಳಿ ಸಾಕಾಣಿಕೆ ಕುರಿತು ತರಬೇತಿ ಹಾಗೂ ಕ್ಷೇತ್ರ ಭೇಟಿ

0
11

ಕೊಯಿಲ : ಕೋಳಿ ಸಾಕಾಣಿಕೆ ಇಂದು ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದ್ದು, ಸಾಕಾಣಿಕೆದಾರರು ಕೋಳಿಗಳ ಆರೋಗ್ಯ ನಿರ್ವಹಣೆ, ಔಷಧೋಪಚಾರ, ಲಸಿಕೆ ಹಾಗೂ ವೈಜ್ಞಾನಿಕ ನಿರ್ವಹಣಾ ಕ್ರಮಗಳ ಕುರಿತು ನಿರಂತರ ಮಾಹಿತಿ ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಮಂಜುನಾಥ್ ಪಾಟೀಲ್ ಹೇಳಿದರು.

ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಸುಧಾರಿತ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋಳಿ ಮೊಟ್ಟೆ ಮತ್ತು ಮಾಂಸದಲ್ಲಿರುವ ಪೌಷ್ಟಿಕಾಂಶಗಳು ಹಾಗೂ ಕೋಳಿ ಫಾರ್ಮ್‌ಗಳಲ್ಲಿ ನೊಣಗಳ ನಿಯಂತ್ರಣಕ್ಕೆ ಸಂಬಂಧಿಸಿದ ಸಂಶೋಧನೆಗಳ ಬಗ್ಗೆಯೂ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಯಿಲ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಪುನೀತ್ ಅವರು ಗಿರಿರಾಜ ಕೋಳಿ ಮರಿಗಳು ಹಾಗೂ ಮೈಸೂರು ನಾಟಿ ಕೋಳಿಗಳ ಲಭ್ಯತೆ ಮತ್ತು ಕೋಳಿ ಫಾರ್ಮ್‌ಗಳಲ್ಲಿ ಜೈವಿಕ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಕೋಳಿ ಫಾರ್ಮ್‌ಗಳಲ್ಲಿ ನೊಣಗಳ ಕಾಟ ಹೆಚ್ಚಾಗಿದ್ದು, ಇದರಿಂದ ಸಾಕಾಣಿಕೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಪಶುವೈದ್ಯಕೀಯ ಇಲಾಖೆ ಜಂಟಿಯಾಗಿ ನೊಣಗಳ ನಿಯಂತ್ರಣದ ಕುರಿತು ಸಂಶೋಧನೆ ನಡೆಸಿ ಅದರ ಪ್ರಯೋಜನವನ್ನು ರೈತರಿಗೆ ತಲುಪಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ ಗೌಡ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ತೇವಾಂಶ ಹಾಗೂ ಕೋಳಿ ಫಾರ್ಮ್‌ಗಳನ್ನು ಸ್ಥಾಪಿಸಲು ಸ್ಥಳಾವಕಾಶದ ಕೊರತೆ ಇರುವುದರಿಂದ ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ಕೋಳಿ ಸಾಕಾಣಿಕೆದಾರರಿಗೆ ತಲುಪಿಸುವ ಪ್ರಯತ್ನವಾಗಬೇಕು ಎಂದು ಕಡಬ ಕೋಳಿ ಸಾಕಾಣಿಕೆ ರೈತ ಸಂಘಟನೆಯ ಅಧ್ಯಕ್ಷ ಸೂರ್ಯನಾರಾಯಣ ಭಟ್ ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ರವಿಪ್ರಸಾದ್ ಅವರು ಗುತ್ತಿಗೆ ಆಧಾರಿತ ಕೋಳಿ ಸಾಕಾಣಿಕೆ ಪದ್ಧತಿ ಹಾಗೂ ಅದರ ಅನುಕೂಲತೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸುಧಾರಿತ ಕೋಳಿ ಸಾಕಾಣಿಕೆಯ ವೈಜ್ಞಾನಿಕ ಮಾಹಿತಿಗಳನ್ನು ಒಳಗೊಂಡ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಾಗರ್ ಆರ್.ಎಸ್., ಡಾ. ಹರಿಣಿ ಕೆ.ಆರ್., ಡಾ. ರಶ್ಮಿ ಕೆ.ಎಂ., ಡಾ. ರಜತ್ ಸಗಾರೆ, ಡಾ. ಸಾಗರ್ ಎಂ., ಡಾ. ತೇಜಸ್ವಿನಿ ಎಂ.ಪಿ., ಡಾ. ವಸುಧರ್ ಭಟ್ ಹಾಗೂ ಡಾ. ಯಶಸ್ ಆರ್. ಕುಮಾರ್ ಅವರು ವಿವಿಧ ವಿಷಯಗಳ ಕುರಿತು ತರಬೇತಿ ನೀಡಿದರು.

ಮಧ್ಯಾಹ್ನದ ಅವಧಿಯಲ್ಲಿ ತರಬೇತಿಯಲ್ಲಿ ಭಾಗವಹಿಸಿದವರಿಗೆ ಕೊಯಿಲದ ಪ್ರಗತಿಪರ ಕೋಳಿ ಉದ್ಯಮಿ ಅಬ್ದುಲ್ ರಜಾಕ್ ಅವರ ಕೋಳಿ ಸಾಕಾಣಿಕೆ ಘಟಕಕ್ಕೆ ಕ್ಷೇತ್ರ ಭೇಟಿ ಏರ್ಪಡಿಸಲಾಯಿತು. ಈ ಮೂಲಕ ಕೋಳಿ ಸಾಕಾಣಿಕೆಯ ಪ್ರಾಯೋಗಿಕ ವಿಧಾನಗಳು ಹಾಗೂ ಉದ್ಯಮದ ವಾಸ್ತವಿಕ ಸ್ಥಿತಿಗತಿಗಳ ಬಗ್ಗೆ ತರಬೇತಿದಾರರಿಗೆ ಮಾಹಿತಿ ನೀಡಲಾಯಿತು.

ಸಹಾಯಕ ಪ್ರಾಧ್ಯಾಪಕಿ ಡಾ. ರಶ್ಮಿ ಕೆ.ಎಂ. ಸ್ವಾಗತಿಸಿದರು. ಡಾ. ಸಾಗರ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಸುಧರ್ ಭಟ್ ವಂದಿಸಿದರು. ಡಾ. ತೇಜಸ್ವಿನಿ ಎಂ.ಪಿ. ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‌ನ ವಿಸ್ತರಣಾ ನಿರ್ದೇಶನಾಲಯದ ಆರ್ಥಿಕ ಸಹಕಾರದಲ್ಲಿ ತರಬೇತಿ ಹಾಗೂ ಕ್ಷೇತ್ರ ಭೇಟಿಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.