ಬೆಳ್ತಂಗಡಿ : ಗುರುವಾಯನಕೆರೆ–ಮೂಡಬಿದಿರೆ ರಸ್ತೆಯಲ್ಲಿ ಕಾರಿನ ಮೂಲಕ ನಿಷೇಧಿತ ಎಂಡಿಎಂಎ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವೇಣೂರು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಕಾರ್ಯಾಚರಣೆಯಲ್ಲಿ 4 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ತನ್ವೀರ್(27) ಹಾಗೂ ಮೂಡಬಿದಿರೆ ತಾಲೂಕಿನ ಕಲ್ಲಬೆಟ್ಟು ನಿವಾಸಿ ಮುಹಮ್ಮದ್ ಸಲ್ವಾನ್(22) ಎಂದು ಗುರುತಿಸಲಾಗಿದೆ.
ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮೇ 27ರಂದು ಕಂಬಳದಡ್ಡ ಸಮೀಪ ಗುರುವಾಯನಕೆರೆ–ಮೂಡಬಿದಿರೆ ರಸ್ತೆಯಲ್ಲಿ ನಾಖಾಬಂದಿ ನಡೆಸಿ ವಾಹನ ತಪಾಸಣೆ ಕೈಗೊಳ್ಳಲಾಯಿತು. ಈ ವೇಳೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಐ20 ಕಾರನ್ನು ತಡೆದು ಪರಿಶೀಲಿಸಿದಾಗ, ಮಾರಾಟ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿದ್ದ 4 ಗ್ರಾಂ ಎಂಡಿಎಂಎ ಮಾದಕವಸ್ತು ಪತ್ತೆಯಾಗಿದೆ.
ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ಹಂಝತ್ ಕರಾರ್ ಎಂಬಾತ ಈ ಮಾದಕವಸ್ತುವನ್ನು ಮಾರಾಟಕ್ಕಾಗಿ ನೀಡಿದ್ದಾನೆ ಎಂದು ಆರೋಪಿಗಳು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ಮೇ 28ರಂದು ಮಂಗಳೂರು ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ಮುಂದುವರಿದಿದೆ.

