ಹೆದ್ದಾರಿ ದಾಟುತ್ತಿದ್ದ ಸೈಕಲ್ ಸವಾರನಿಗೆ ಲಾರಿ ಡಿಕ್ಕಿ : ವ್ಯಕ್ತಿ ಮೃತ

0
6

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ತಾಲೂಕಿನ ಮಾಬುಕಳ ಸರ್ಕಲ್‌ನಲ್ಲಿ ಲಾರಿಯೊಂದು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಬಾಳ್ಕುದ್ರು ನಿವಾಸಿ ರೊನಾಲ್ಡ್ ಲೂವಿಸ್ (62) ಎಂದು ಗುರುತಿಸಲಾಗಿದೆ. ಅವರು ಹಂಗಾರಕಟ್ಟೆ ಅಂಚೆ ಕಚೇರಿಯಲ್ಲಿ ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ರೊನಾಲ್ಡ್ ಅವರು ಸೈಕಲ್‌ನಲ್ಲಿ ಹಂಗಾರಕಟ್ಟೆಯಿಂದ ಮಾಬುಕಳ ಸರ್ಕಲ್‌ಗೆ ಬಂದು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಉಡುಪಿ ಕಡೆಯಿಂದ ಕುಮಟಾ ಕಡೆಗೆ ತೆರಳುತ್ತಿದ್ದ ಲಾರಿ, ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ರಸ್ತೆ ಮಧ್ಯಭಾಗವನ್ನು ದಾಟಿ ಬಲಬದಿಗೆ ಬಂದು ಸೈಕಲ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯ ರಭಸಕ್ಕೆ ಸೈಕಲ್‌ನಿಂದ ರಸ್ತೆಗೆ ಬಿದ್ದ ರೊನಾಲ್ಡ್ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಟೋಲ್‌ಗೇಟ್‌ನ ಆಂಬುಲೆನ್ಸ್ ಮೂಲಕ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.