-ಮಂದಾರ ರಾಜೇಶ್ ಭಟ್
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವು ಕಾಲೇಜಿನ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ‘ಹೊಸ ದಿಗಂತ’ ರಾಜ್ಯ ದೈನಿಕದ ವರದಿಗಾರರಾದ ಶ್ರೀ ಹರೀಶ್ ಆದೂರು ಅವರು, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸತ್ಯನಿಷ್ಠ ವರದಿಗಾರಿಕೆಯ ಮಹತ್ವ ಹಾಗೂ ಪತ್ರಿಕೋದ್ಯಮದ ಪ್ರಾಯೋಗಿಕ ಸವಾಲುಗಳನ್ನು ವಿದ್ಯಾರ್ಥಿಗಳಿಗೆ ಅತ್ಯಂತ ಆಕರ್ಷಕವಾಗಿ ಮನವರಿಕೆ ಮಾಡಿಕೊಟ್ಟರು.
ಮುಂದುವರಿದು ಮಾತನಾಡಿದ ಅವರು ಭವಿಷ್ಯದ ಪತ್ರಕರ್ತರಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು.
ಒಬ್ಬ ಉತ್ತಮ ಪತ್ರಕರ್ತನಾಗಲು ಸದಾ ಜಾಗೃತವಾಗಿರುವ ಕುತೂಹಲ, ಪ್ರಶ್ನಿಸುವ ಮನೋಭಾವ ಮತ್ತು ಸಮಾಜದ ಬಗ್ಗೆ ತೀವ್ರ ಕಾಳಜಿ ಇರಬೇಕಾದದ್ದು ಅತ್ಯಗತ್ಯ ಎಂದರು.
ಇಂದಿನ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಕೇವಲ ಸೈದ್ಧಾಂತಿಕ ಜ್ಞಾನಕ್ಕೆ ಸೀಮಿತವಾಗದೆ, ಮಲ್ಟಿಮೀಡಿಯಾ ತಾಂತ್ರಿಕ ಕೌಶಲ್ಯಗಳನ್ನು ಇಂದಿನಿಂದಲೇ ಮೈಗೂಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಬದುಕಿನಲ್ಲಿ ಸದಾ ಸತ್ಯ, ನಿಷ್ಠೆ ಮತ್ತು ನೈತಿಕತೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಇಂದಿನ ಕಠಿಣ ಪರಿಶ್ರಮವೇ ನಾಳೆಯ ಯಶಸ್ಸಿನ ಬುನಾದಿಯಾಗಲಿದ್ದು, ಹೊಸ ವಿದ್ಯಾರ್ಥಿಗಳ ಪತ್ರಿಕೋದ್ಯಮದ ಪಯಣ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.

