ತುಳು ವಿಕಿಪೀಡಿಯ ದಶಮಾನೋತ್ಸವಕ್ಕೆ ಸಜ್ಜು : ಸೆ.12–13ರಂದು ಮಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ

0
9

ಮಂಗಳೂರು: ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಡಿಜಿಟಲ್ ಜಗತ್ತಿನಲ್ಲಿ ದಾಖಲಿಸುವ ಮಹತ್ವದ ವೇದಿಕೆಯಾದ ತುಳು ವಿಕಿಪೀಡಿಯ ತನ್ನ ಲೈವ್ ಆವೃತ್ತಿಯ 10 ವರ್ಷಗಳನ್ನು ಪೂರೈಸಿದೆ. ಈ ದಶಕದ ಪಯಣವನ್ನು ಸ್ಮರಿಸುವುದು ಹಾಗೂ ಮುಂದಿನ ಕಾರ್ಯಯೋಜನೆ ರೂಪಿಸುವ ಉದ್ದೇಶದಿಂದ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ವತಿಯಿಂದ ಸೆಪ್ಟೆಂಬರ್ 12 ಮತ್ತು 13ರಂದು ಮಂಗಳೂರಿನ ಎ.ಜೆ. ಗ್ರ್ಯಾಂಡ್ ಹೋಟೆಲ್‌ನಲ್ಲಿ ಎರಡು ದಿನಗಳ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

2008ರಲ್ಲಿ ಆರಂಭಗೊಂಡ ತುಳು ವಿಕಿಪೀಡಿಯ ಸುಮಾರು ಎಂಟು ವರ್ಷಗಳ ಕಾಲ ಇನ್‌ಕ್ಯುಬೇಟರ್ ಹಂತದಲ್ಲಿದ್ದು, 2016ರ ಆಗಸ್ಟ್ 6ರಂದು ಅಧಿಕೃತವಾಗಿ ಲೈವ್ ಆಯಿತು. ಇದರೊಂದಿಗೆ ತುಳು ವಿಕಿಪೀಡಿಯ ಜಾಗತಿಕ ವಿಕಿಪೀಡಿಯ ವೇದಿಕೆಯಲ್ಲಿ ಭಾರತದ 23ನೇ ಭಾಷಾ ಆವೃತ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪ್ರಸ್ತುತ ತುಳು ವಿಕಿಪೀಡಿಯದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 3,800ಕ್ಕೂ ಅಧಿಕ ಲೇಖನಗಳು ಲಭ್ಯವಿವೆ.

ಸ್ವಯಂಸೇವಕರ ಪರಿಶ್ರಮದ ಫಲ

ತುಳು ವಿಕಿಪೀಡಿಯದ ಬೆಳವಣಿಗೆಯ ಹಿಂದೆ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವೆಯೂ ಸಮಯ ಮೀಸಲಿಟ್ಟು ಲೇಖನ ಬರೆಯುವುದು, ಮಾಹಿತಿಯನ್ನು ಸಂಗ್ರಹಿಸುವುದು, ಛಾಯಾಚಿತ್ರಗಳನ್ನು ದಾಖಲಿಸುವುದು, ಮೂಲ ದಾಖಲೆಗಳನ್ನು ಪರಿಶೀಲಿಸುವುದು, ಉಲ್ಲೇಖಗಳನ್ನು ಸೇರಿಸುವುದು ಹಾಗೂ ಲೇಖನಗಳನ್ನು ಸಂಪಾದಿಸುವ ಕಾರ್ಯದಲ್ಲಿ ತೊಡಗಿರುವ ಹಲವು ಸ್ವಯಂಸೇವಕರ ನಿರಂತರ ಪರಿಶ್ರಮವಿದೆ.

ಆರಂಭಿಕ ಹಂತದಲ್ಲಿ ಡಾ. ಯು.ಬಿ. ಪವನಜ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸಿತ್ತು. ಪ್ರೊ. ಬಿ.ಎ. ವಿವೇಕ ರೈ, ಪ್ರೊ. ಎ.ವಿ. ನಾವಡ, ಕೆ.ಪಿ. ರಾವ್, ವಾಮನ ನಂದಾವರ, ಡಾ. ವಿಶ್ವನಾಥ ಬದಿಕಾನ ಹಾಗೂ ಡಾ. ಕಿಶೋರ್ ಕುಮಾರ್ ರೈ ಶೇಣಿ ಸೇರಿದಂತೆ ಹಲವು ವಿದ್ವಾಂಸರು ಮತ್ತು ಸ್ವಯಂಸೇವಕರು ಈ ಪ್ರಯತ್ನಕ್ಕೆ ಬೆಂಬಲ ನೀಡಿದ್ದರು.

ಚಂಡೀಗಢದಲ್ಲಿ ನಡೆದ ಅನಿರೀಕ್ಷಿತ ಘೋಷಣೆ

2016ರಲ್ಲಿ ಚಂಡೀಗಢದಲ್ಲಿ ನಡೆದ ವಿಕಿಮೀಡಿಯಾ ಇಂಡಿಯಾ ಸಮ್ಮೇಳನದಲ್ಲಿ ವಿಕಿಮೀಡಿಯಾ ಫೌಂಡೇಶನ್‌ನ ಅಂದಿನ ಸಿಇಒ ಕ್ಯಾಥರಿನ್ ಮಹರ್ ಅವರು ತುಳು ವಿಕಿಪೀಡಿಯ ಲೈವ್ ಆಗಿರುವುದನ್ನು ಘೋಷಿಸಿದ್ದರು. ಈ ಸಂದರ್ಭ ತುಳು ವಿಕಿಪೀಡಿಯ ಸ್ವಯಂಸೇವಕರಿಗೆ ಅನಿರೀಕ್ಷಿತ ಹಾಗೂ ಸ್ಮರಣೀಯ ಕ್ಷಣವಾಗಿತ್ತು.

ಆ ಸಂದರ್ಭದಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಯು.ಬಿ. ಪವನಜ, ಡಾ. ವಿಶ್ವನಾಥ ಬದಿಕಾನ ಹಾಗೂ ಭರತೇಶ ಅಲಸಂಡೆಮಜಲು ಅವರನ್ನು ವೇದಿಕೆಗೆ ಆಹ್ವಾನಿಸಿ ಈ ಸಾಧನೆಗಾಗಿ ಗೌರವಿಸಲಾಗಿತ್ತು. ಬಳಿಕ ತುಳು ಭಾಷೆ ಹಾಗೂ ತುಳು ವಿಕಿಪೀಡಿಯಕ್ಕೆ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಗಮನ ದೊರೆಯಿತು.

ಸಂಸ್ಕೃತಿಯಿಂದ ವಿಜ್ಞಾನ, ಭೂಗೋಳದವರೆಗೆ

ಆರಂಭದಲ್ಲಿ ಭೂತಾರಾಧನೆ, ಭೂತಕೋಲ, ಜನಪದ, ಸ್ಥಳೀಯ ಆಚರಣೆಗಳು, ಸಂಪ್ರದಾಯಗಳು ಹಾಗೂ ತುಳುನಾಡಿನ ಸಾಂಸ್ಕೃತಿಕ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇದೀಗ ಪ್ರಮುಖ ವ್ಯಕ್ತಿಗಳು, ಗ್ರಾಮಗಳು, ತಾಲೂಕುಗಳು, ಶಿಕ್ಷಣ ಸಂಸ್ಥೆಗಳು, ಕಲಾವಿದರು, ಸಿನಿಮಾ, ಭೂಗೋಳ, ಪ್ರಕೃತಿ, ಆಹಾರ ಪರಂಪರೆ ಹಾಗೂ ಔಷಧೀಯ ಸಸ್ಯಗಳು ಸೇರಿದಂತೆ ವಿವಿಧ ವಿಷಯಗಳನ್ನು ತುಳು ವಿಕಿಪೀಡಿಯದಲ್ಲಿ ದಾಖಲಿಸಲಾಗುತ್ತಿದೆ.

ಸ್ಥಳೀಯ ಹಾಗೂ ಮೂಲನಿವಾಸಿ ಜ್ಞಾನವನ್ನು ಡಿಜಿಟಲ್ ರೂಪದಲ್ಲಿ ಮುಂದಿನ ಪೀಳಿಗೆಗೆ ಉಳಿಸುವುದು ತುಳು ವಿಕಿಪೀಡಿಯದ ಪ್ರಮುಖ ಉದ್ದೇಶವಾಗಿದೆ. ಹೊಸ ತುಳು ಸಿನಿಮಾಗಳು, ಕಲಾವಿದರು, ಪ್ರಾದೇಶಿಕ ಸಾಧಕರು, ಗ್ರಾಮಗಳು ಹಾಗೂ ಸಂಸ್ಥೆಗಳ ಮಾಹಿತಿಯನ್ನು ದಾಖಲಿಸುವ ಮೂಲಕ ವಿಸ್ತೃತ ಡಿಜಿಟಲ್ ಜ್ಞಾನಭಂಡಾರ ನಿರ್ಮಿಸುವ ಗುರಿಯನ್ನು ಸ್ವಯಂಸೇವಕರು ಹೊಂದಿದ್ದಾರೆ.

ವಿದ್ಯಾರ್ಥಿಗಳಿಗೆ ವಿಕಿಪೀಡಿಯ ಸಂಪಾದನಾ ತರಬೇತಿ

2017ರಲ್ಲಿ ಮಂಗಳೂರಿನಲ್ಲಿ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಸ್ಥಾಪನೆಯಾದ ಬಳಿಕ ವಿವಿಧ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ವಿಕಿಪೀಡಿಯ ಸಂಪಾದನಾ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ವಿಕಿಪೀಡಿಯ ಬಳಕೆ, ಲೇಖನ ರಚನೆ, ಉಲ್ಲೇಖಗಳ ಬಳಕೆ, ಸಂಶೋಧನಾ ಮಾಹಿತಿ ಸಂಗ್ರಹ, ಛಾಯಾಚಿತ್ರ ದಾಖಲಾತಿ ಹಾಗೂ ವಿಕಿಮೀಡಿಯಾ ಕಾಮನ್ಸ್‌ಗೆ ಮಾಧ್ಯಮ ಅಪ್‌ಲೋಡ್ ಮಾಡುವ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ಸೇಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯೂನಿವರ್ಸಿಟಿ, ಆಳ್ವಾಸ್ ಕಾಲೇಜು, ಎಸ್‌ಡಿಎಂ ಕಾಲೇಜು ಉಜಿರೆ, ಕೆನರಾ ಕಾಲೇಜು ಹಾಗೂ ರಾಮಕೃಷ್ಣ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯ ಮುಂದುವರಿದಿದೆ.

‘ಆತಿ’ ಯೋಜನೆಯಡಿ 500ಕ್ಕೂ ಅಧಿಕ ಲೇಖನ

2025ರಲ್ಲಿ ತುಳುನಾಡಿನ ಸಾಂಪ್ರದಾಯಿಕ ಆತಿ ತಿಂಗಳ ಕುರಿತು ಎಡಿಟ್-ಎ-ಥಾನ್ ಹಾಗೂ ದಾಖಲಾತಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಆತಿ ತಿಂಗಳ ಆಹಾರ, ಆಚರಣೆ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ 500ಕ್ಕೂ ಅಧಿಕ ಲೇಖನಗಳು ಹಾಗೂ 3,000ಕ್ಕೂ ಹೆಚ್ಚು ಛಾಯಾಚಿತ್ರಗಳು, ವೀಡಿಯೋಗಳು ಮತ್ತು ಆಡಿಯೋ ದಾಖಲೆಗಳನ್ನು ವಿಕಿಮೀಡಿಯಾ ಕಾಮನ್ಸ್‌ಗೆ ಸೇರಿಸಲಾಯಿತು.

ಪ್ರಸ್ತುತ ‘Wiki Loves Tuluvad’s Living and Cultural Heritage’ ಯೋಜನೆಯಡಿ ತುಳುನಾಡಿನ ಜೀವಂತ ಪರಂಪರೆ ಹಾಗೂ ಸ್ಥಳೀಯ ಜ್ಞಾನವನ್ನು ದಾಖಲಿಸುವ ಕಾರ್ಯ ನಡೆಯುತ್ತಿದೆ.

ಎಐ ಯುಗದಲ್ಲಿ ಪ್ರಾದೇಶಿಕ ಭಾಷಾ ಡಿಜಿಟಲ್ ಮಾಹಿತಿಯ ಮಹತ್ವ

ಕೃತಕ ಬುದ್ಧಿಮತ್ತೆ, ಯಂತ್ರ ಅನುವಾದ ಹಾಗೂ ಸರ್ಚ್ ತಂತ್ರಜ್ಞಾನಗಳು ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಸಂದರ್ಭದಲ್ಲಿ ತುಳು ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ವಿಶ್ವಾಸಾರ್ಹ ಡಿಜಿಟಲ್ ಮಾಹಿತಿಯ ಲಭ್ಯತೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ತುಳು ಭಾಷೆಯಲ್ಲಿ ಗುಣಮಟ್ಟದ ಮುಕ್ತ ಡಿಜಿಟಲ್ ಮಾಹಿತಿಯನ್ನು ಸೃಷ್ಟಿಸುವುದರಿಂದ ಭವಿಷ್ಯದ ಭಾಷಾ ತಂತ್ರಜ್ಞಾನಗಳು ಹಾಗೂ ಎಐ ಮಾದರಿಗಳಿಗೆ ಅಗತ್ಯವಿರುವ ಮೂಲ ದತ್ತಾಂಶವನ್ನು ಒದಗಿಸಲು ಸಾಧ್ಯವಾಗಲಿದೆ. ಜತೆಗೆ ಜಾಗತಿಕ ಜ್ಞಾನವನ್ನು ತುಳು ಭಾಷೆಗೆ ಅನುವಾದಿಸುವ ಮೂಲಕ ತುಳುವಿನ ಡಿಜಿಟಲ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವೂ ಇದೆ.

ಹೆಚ್ಚಿನ ಜನರ ಭಾಗವಹಿಸುವಿಕೆ ಅಗತ್ಯ

ತುಳು ಮಾತನಾಡುವವರನ್ನು ಸಕ್ರಿಯ ವಿಕಿಪೀಡಿಯ ಕೊಡುಗೆದಾರರನ್ನಾಗಿ ರೂಪಿಸುವುದು ಮುಂದಿನ ಪ್ರಮುಖ ಸವಾಲಾಗಿದೆ. ಶಾಲೆಗಳು, ಕಾಲೇಜುಗಳು, ಗ್ರಾಮ ಪಂಚಾಯಿತಿಗಳು, ಸ್ಥಳೀಯ ಸಂಘಟನೆಗಳು, ಸಾಹಿತಿಗಳು, ಶಿಕ್ಷಕರು, ಕಲಾವಿದರು ಹಾಗೂ ಸಾರ್ವಜನಿಕರು ತುಳುನಾಡಿನ ಜ್ಞಾನ ಮತ್ತು ಪರಂಪರೆಯನ್ನು ದಾಖಲಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿದೆ ಎಂದು ಆಯೋಜಕರು ಮನವಿ ಮಾಡಿದ್ದಾರೆ.

ವಿಕಿಪೀಡಿಯ ಯಾವುದೇ ಒಬ್ಬ ವ್ಯಕ್ತಿಯ ಕಾರ್ಯವಲ್ಲ. ನೂರಾರು ಮಂದಿ ಹೊಸ ಮಾಹಿತಿಯನ್ನು ಸೇರಿಸುವುದು, ಹಳೆಯ ಮಾಹಿತಿಯನ್ನು ಪರಿಶೀಲಿಸುವುದು ಹಾಗೂ ಲೇಖನಗಳನ್ನು ಸುಧಾರಿಸುವ ಮೂಲಕ ಇದನ್ನು ಬೆಳೆಸುತ್ತಾರೆ. ಯುವಜನತೆ ಡಿಜಿಟಲ್ ವಿಷಯದ ಕೇವಲ ಬಳಕೆದಾರರಾಗದೆ, ಅದರ ಸಕ್ರಿಯ ಕೊಡುಗೆದಾರರಾಗಬೇಕು ಎಂಬುದು ಸಂಘಟಕರ ಆಶಯವಾಗಿದೆ.

ಸೆಪ್ಟೆಂಬರ್ 12–13ರಂದು ದಶಮಾನೋತ್ಸವ

ತುಳು ವಿಕಿಪೀಡಿಯ ಲೈವ್ ಆವೃತ್ತಿಯ ದಶಮಾನೋತ್ಸವದ ಅಂಗವಾಗಿ ನಡೆಯುವ ಎರಡು ದಿನಗಳ ಕಾರ್ಯಕ್ರಮದಲ್ಲಿ ವಿಕಿಮೀಡಿಯನ್ಸ್, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಭಾಷಾ ಆಸಕ್ತರು, ಸಂಶೋಧಕರು ಹಾಗೂ ಸಮುದಾಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಕಂಪ್ಯೂಟರ್ ವಿಜ್ಞಾನಿ ಡಾ. ಕೆ.ಪಿ. ರಾವ್ ಹಾಗೂ ಕರ್ನಾಟಕ ಸರ್ಕಾರದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ತುಳು ವಿಕಿಪೀಡಿಯದ ಹತ್ತು ವರ್ಷಗಳ ಪಯಣವನ್ನು ಅವಲೋಕಿಸುವುದು, ಆರಂಭಿಕ ಕೊಡುಗೆದಾರರು ಹಾಗೂ ಸ್ವಯಂಸೇವಕರನ್ನು ಗೌರವಿಸುವುದು, ತುಳು ಭಾಷೆಯ ಡಿಜಿಟಲ್ ಭವಿಷ್ಯದ ಕುರಿತು ಚರ್ಚಿಸುವುದು ಹಾಗೂ ಮುಂದಿನ ವರ್ಷಗಳ ಕಾರ್ಯಯೋಜನೆ ರೂಪಿಸುವುದು ಪ್ರಮುಖ ಉದ್ದೇಶವಾಗಿದೆ.

3,800ಕ್ಕೂ ಅಧಿಕ ಲೇಖನಗಳ ಸಾಧನೆಯಷ್ಟೇ ಅಲ್ಲದೆ, ತುಳು ಭಾಷೆಯ ಜ್ಞಾನ, ಸಂಸ್ಕೃತಿ, ಇತಿಹಾಸ ಮತ್ತು ಜನಪದ ಪರಂಪರೆಯನ್ನು ಡಿಜಿಟಲ್ ಜಗತ್ತಿನಲ್ಲಿ ಉಳಿಸುವ ಸಮುದಾಯ ಆಧಾರಿತ ಚಳವಳಿಯಾಗಿ ತುಳು ವಿಕಿಪೀಡಿಯದ ದಶಕದ ಪಯಣ ಗುರುತಿಸಿಕೊಂಡಿದೆ. ಮುಂದಿನ ದಶಕದಲ್ಲಿ ಇನ್ನಷ್ಟು ಮಂದಿ ಕೈಜೋಡಿಸುವ ಮೂಲಕ ತುಳುವಿನ ಡಿಜಿಟಲ್ ಜ್ಞಾನಭಂಡಾರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಆಶಯವನ್ನು ಸಂಘಟಕರು ಹೊಂದಿದ್ದಾರೆ.