ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ನವೆಂಬರ್ 7 ರಿಂದ ಡಿಸೆಂಬರ್ 8ರವರೆಗೆ ಒಂದು ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವ ಕಾರ್ಯಕ್ರಮವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಈ ಸಂಬಂಧ ಕನಕದಾಸ ಜಯಂತಿಯನ್ನು ಆಚರಿಸಲಾಯಿತು ಈ ಪ್ರಯುಕ್ತ ಬೃಹತ್ ಗೀತಾ ಪುಸ್ತಕ ಮತ್ತು ಕನಕದಾಸರ ಭಾವಚಿತ್ರವನ್ನು ಚಿನ್ನದ ರಥದಲ್ಲಿಟ್ಟು ಭವ್ಯವಾದ ಮೆರವಣಿಗೆಯನ್ನು ಮಾಡಲಾಯಿತು.
ನಂತರ ಪೇಜಾವರ ಶ್ರೀಗಳು ಬೃಹತ್ ಗೀತಾ ಪುಸ್ತಕವನ್ನು ರಾಜಾಂಗಣದಲ್ಲಿರುವ ರಥದಲ್ಲಿಟ್ಟು ವಿಶಿಷ್ಟವಾಗಿ ಗೀತೋತ್ಸವವನ್ನು ಉದ್ಘಾಟಿಸಿದರು . ಪೇಜಾವರ ಶ್ರೀಪಾದರಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠದಿಂದ ಶ್ರೀ ರಾಮಸೇವಾ ದುರಂಧರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನಂತರ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷರಾದ ಟಿ. ಸತೀಶ್ ಪೈ, ಡಾ l ಸಂಧ್ಯಾ ಪೈ, ಡಾl ಸದಾಶಿವ ಶೆಟ್ಟಿ ಕನ್ಯಾನ, ಸುಪ್ರಸಾದ್ ಶೆಟ್ಟಿ, ಅಮೆರಿಕಾ ಹಾರ್ವರ್ಡ್ ವಿವಿಯ ಪ್ರೊ. ಫ್ರಾನ್ಸಿಸ್ ಕ್ಲೂನಿ, ಸೀಟಿನ್ ಹಾಲ್ ವಿವಿಯ ಪ್ರೊ. ಆಲನ್ ಬ್ರಿಲ್, ಶ್ರೀ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

