ಮುಂಗಾರು ಅಬ್ಬರಕ್ಕೆ ಉಡುಪಿ ಜಿಲ್ಲೆ ತತ್ತರ : ರಸ್ತೆ ಕುಸಿತ, ಮನೆಗಳಿಗೆ ಹಾನಿ, ಸಂಚಾರ ಅಸ್ತವ್ಯಸ್ತ

0
88

ಉಡುಪಿ : ಉಡುಪಿ ಜಿಲ್ಲಾದ್ಯಂತ ಶನಿವಾರ ರಾತ್ರಿಯಿಂದ ಮುಂಗಾರು ಮಳೆ ಬಿರುಸುಗೊಂಡಿದ್ದು, ರವಿವಾರವೂ ಗುಡುಗು-ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಹಲವು ಕಡೆ ರಸ್ತೆಗಳ ಮೇಲೆ ನೀರು ಹರಿದು ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಯಿತು. ಹವಾಮಾನ ಇಲಾಖೆ ಜೂ.15ರ ಬೆಳಗ್ಗೆವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಜನರು ಎಚ್ಚರಿಕೆಯಿಂದ ಇರಲು ಸೂಚಿಸಿದೆ.

ಜಿಲ್ಲೆಯ ಉಡುಪಿ, ಮಣಿಪಾಲ, ಪರ್ಕಳ, ಹಿರಿಯಡಕ, ಕಟಪಾಡಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಕಾಪು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕಾಪು ತಾಲೂಕಿನಲ್ಲಿ 57.8 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 32.9 ಮಿ.ಮೀ. ಮಳೆಯಾಗಿದೆ.

ಇನ್ನೊಂದೆಡೆ, ಉಪ್ಪುಂದ ಸಮೀಪದ ಅರೆ ಶಿರೂರಿನಲ್ಲಿ ಕೊಲ್ಲೂರು ಸಂಪರ್ಕಕ್ಕಾಗಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆ ಭಾರೀ ಮಳೆಯಿಂದ ಕೊಚ್ಚಿ ಹೋಗಿದ್ದು, ಬೈಂದೂರು–ಕೊಲ್ಲೂರು ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ತೋಡು ಹಾಗೂ ಹೊಳೆಗಳಲ್ಲಿ ನೀರಿನ ಹರಿವು ಏರಿಕೆಯಾಗಿರುವುದರಿಂದ ರಸ್ತೆ ಕುಸಿತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು.

ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿಯೂ ಗಾಳಿ-ಮಳೆಗೆ ಏಳು ಮನೆಗಳಿಗೆ ಹಾನಿಯಾಗಿದೆ. ಹಲವೆಡೆ ಮನೆಗಳ ಮೇಲೆ ಮರಗಳು ಬಿದ್ದು ನಷ್ಟ ಸಂಭವಿಸಿದ್ದು, ಸ್ಥಳೀಯಾಡಳಿತ ಹಾನಿಯ ಪರಿಶೀಲನೆ ನಡೆಸುತ್ತಿದೆ. ತಲ್ಲೂರು-ಉಪ್ಪಿನಕುದ್ರು ರಸ್ತೆಯಲ್ಲಿ ಚರಂಡಿ ವ್ಯವಸ್ಥೆಯ ಕೊರತೆಯಿಂದ ರಸ್ತೆ ಹೊಳೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು.

ಮೂಡುಗಲ್ಲು ಗುಹಾಂತರ ದೇವಸ್ಥಾನ ಸಂಪರ್ಕಿಸುವ ಮಣ್ಣಿನ ರಸ್ತೆಯೂ ಕೆಸರುಮಯಗೊಂಡಿದ್ದು, ರಜಾ ದಿನದಂದು ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಸಂಚಾರ ಸಮಸ್ಯೆ ಎದುರಿಸಿದರು. ಮುಂಗಾರು ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ನದಿ, ತೋಡು ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

LEAVE A REPLY

Please enter your comment!
Please enter your name here