ಬೆಚ್ಚಿಬೀಳಿಸಿದ ಪ್ರೇಮಕಥೆಯ ದುರಂತ ಅಂತ್ಯ : ವಿಷ ಕುಡಿಸಿ ಕುತ್ತಿಗೆ ಹಿಸುಕಿ ಪತ್ನಿಯ ಹತ್ಯೆ

0
132

ಬೆಂಗಳೂರು : ಈಗಾಗಲೇ ರಹಸ್ಯವಾಗಿ ವಿವಾಹವಾಗಿದ್ದರೂ, ಪಾಲಕರ ಒತ್ತಾಯದ ಮೇರೆಗೆ ಮತ್ತೊಂದು ಮದುವೆಗೆ ಸಿದ್ಧವಾಗಿದ್ದ ಪತ್ನಿಯನ್ನು ಪತಿಯೇ ವಿಷ ಕುಡಿಸಿ ಬಳಿಕ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ ಭೀಕರ ಘಟನೆ ಬೆಂಗಳೂರಿನ ತಿಗಳರಪಾಳ್ಯದಲ್ಲಿ ನಡೆದಿದೆ. ಭವಾನಿ (22) ಮೃತ ದುರ್ದೈವಿ ಯುವತಿ. ಪ್ರಕರಣ ಸಂಬಂಧ ಆರೋಪಿ ಚಂದ್ರಶೇಖರ್ ಅಲಿಯಾಸ್ ಚಂದನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಭವಾನಿ ಎರಡು ವರ್ಷಗಳಿಂದ ಮನೆ ಸಮೀಪದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆಟೋ ಚಾಲಕನಾಗಿದ್ದ ಚಂದನ್ ಪರಿಚಯವಾಗಿ ಬಳಿಕ ಅದು ಪ್ರೀತಿಗೆ ತಿರುಗಿತ್ತು. ಕೆಲ ತಿಂಗಳ ಹಿಂದೆ ಇಬ್ಬರೂ ದೇವಸ್ಥಾನದಲ್ಲಿ ರಹಸ್ಯವಾಗಿ ಮದುವೆಯಾಗಿದ್ದರೂ, ಈ ವಿಷಯವನ್ನು ಕುಟುಂಬ ಸದಸ್ಯರಿಂದ ಮುಚ್ಚಿಟ್ಟಿದ್ದರು.

ಇತ್ತೀಚೆಗೆ ಭವಾನಿಗೆ ಮನೆಯವರು ಬೇರೆ ಮದುವೆ ನಿಶ್ಚಯಿಸಿದ್ದು, ಕುಟುಂಬದ ಮನವಿಗೆ ಮಣಿದು ಆಕೆ ಸಹ ಒಪ್ಪಿಗೆ ಸೂಚಿಸಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದ ಚಂದನ್ ಆಕ್ರೋಶಗೊಂಡು ಮದುವೆ ಮಾಡಿಕೊಳ್ಳದಂತೆ ಒತ್ತಡ ಹೇರಿದ್ದ. ಆದರೆ ಭವಾನಿ ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರೂ ವಿಷ ಸೇವಿಸಿ ಸಾಯೋಣ ಎಂದು ಹೇಳಿ ವಿಷದ ಬಾಟಲಿ ತಂದಿದ್ದಾನೆ.

ಆದರೆ ಆತ್ಮಹತ್ಯೆಗೆ ಭವಾನಿ ಒಪ್ಪದಿದ್ದಾಗ, ಬಲವಂತವಾಗಿ ಹೆಚ್ಚಿನ ಪ್ರಮಾಣದ ವಿಷ ಕುಡಿಸಿ ಬಳಿಕ ಕುತ್ತಿಗೆ ಹಿಸುಕಿ ಹತ್ಯೆಗೈದಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ತಾನೂ ಸ್ವಲ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಬಯಲಾಯಿತು ರಹಸ್ಯ ಮದುವೆ

ಚಂದನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೇವಸ್ಥಾನದಲ್ಲಿ ನಡೆದ ಮದುವೆಯ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಕೆಲವರು ಭವಾನಿ ತಂದೆ ಶ್ರೀನಿವಾಸ್ ಅವರಿಗೆ ಮಾಹಿತಿ ನೀಡಿ ವಿಡಿಯೊ ಲಿಂಕ್ ಕಳುಹಿಸಿದ್ದರು. ಮಗಳಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಕಾರಣ ಅನುಮಾನಗೊಂಡ ಅವರು ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.

ಮನೆ ಮಾಲೀಕರು ಮನೆಗೆ ತೆರಳಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿದ್ದು, ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಬಳಿಕ ಶ್ರೀನಿವಾಸ್ ಬೆಂಗಳೂರಿಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಭವಾನಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಸ್ವಸ್ಥನಾಗಿದ್ದ ಚಂದನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಬಳಿಕ ನಡೆದ ವಿಚಾರಣೆಯಲ್ಲಿ ಚಂದನ್ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here