ಉಡುಪಿ : ಪುಸ್ತಕ ಓದುವಿಕೆಯಿಂದ ವಿವೇಚನಾಶಕ್ತಿ ವೃದ್ಧಿ

0
7

ಉಡುಪಿ : ಕೃತಕ ಬುದ್ಧಿಮತ್ತೆ (AI) ವೇಗವಾಗಿ ಬೆಳೆಯುತ್ತಿರುವ ಇಂದಿನ ಯುಗದಲ್ಲಿಯೂ ಪುಸ್ತಕ ಓದುವ ಹವ್ಯಾಸದ ಮಹತ್ವ ಕಡಿಮೆಯಾಗಿಲ್ಲ ಎಂದು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲೆ ಪ್ರೊ. ನಿಕೇತನ ಹೇಳಿದರು.

ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಕಾಲೇಜಿನ ಐಕ್ಯುಎಸಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘AI ನಮಗೆ ಮಾಹಿತಿಯನ್ನು ತ್ವರಿತವಾಗಿ ಒದಗಿಸಬಹುದು. ಆದರೆ ಆ ಮಾಹಿತಿಯನ್ನು ಅರ್ಥೈಸಿ, ವಿಶ್ಲೇಷಿಸಿ ಹಾಗೂ ವಿವೇಚನಾತ್ಮಕವಾಗಿ ಬಳಸುವ ಸಾಮರ್ಥ್ಯವನ್ನು ಪುಸ್ತಕ ಓದುವಿಕೆ ಬೆಳೆಸುತ್ತದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜತೆಗೆ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು’ ಎಂದರು.

ಡಿಜಿಟಲ್ ಸಂಪನ್ಮೂಲಗಳು ಹಾಗೂ AI ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸುವುದರ ಜತೆಗೆ ಪುಸ್ತಕಗಳೊಂದಿಗೆ ನಿರಂತರ ಒಡನಾಟ ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.

ಪ್ರದರ್ಶನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಮುಖ ಗ್ರಂಥಗಳನ್ನು ಪ್ರದರ್ಶಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ವೀಕ್ಷಿಸಿ ಪುಸ್ತಕಗಳ ಕುರಿತು ಮಾಹಿತಿ ಪಡೆದುಕೊಂಡರು.

ಐಕ್ಯುಎಸಿ ಸಂಚಾಲಕಿ ಪ್ರೊ. ಅಡಿಗ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಭಟ್‌, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಾಜೇಂದ್ರ ಕೆ., ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಪ್ರಸನ್ನ ಪಿ.ಬಿ., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ವಿದ್ಯಾ ಡಿ., ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ಯೋಗೇಶ್ ಡಿ.ಎಚ್., ವಾಣಿಜ್ಯ ವಿಭಾಗದ ಡಾ. ಸಂತೋಷ್, ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕವಿತಾ ಹಾಗೂ ಭೌತಶಾಸ್ತ್ರ ವಿಭಾಗದ ಜಯಲಿಂಗಮೂರ್ತಿ ಉಪಸ್ಥಿತರಿದ್ದರು.

ಮುಖ್ಯ ಗ್ರಂಥಪಾಲಕ ಹಾಗೂ ಕಾರ್ಯಕ್ರಮದ ಸಂಯೋಜಕ ವೆಂಕಟೇಶ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಂಥಾಲಯ ಸಹಾಯಕಿ ಶಮ್ಮಿ ಕಾರ್ಯಕ್ರಮ ನಿರ್ವಹಿಸಿದರು. ವಿಜಯಲಕ್ಷ್ಮಿ ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಹಕರಿಸಿದರು.

ಓದುವ ಸಂಸ್ಕೃತಿಯನ್ನು ಬೆಳೆಸುವುದು, ಜ್ಞಾನವನ್ನು ವಿಸ್ತರಿಸುವುದು ಹಾಗೂ AI ಯುಗದಲ್ಲಿ ವಿದ್ಯಾರ್ಥಿಗಳ ವಿವೇಚನಾಶಕ್ತಿಯನ್ನು ಗಟ್ಟಿಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.