ಪತಿ-ಪತ್ನಿ ಜಗಳದಲ್ಲಿ ಬಲಿಯಾಯ್ತು ಏನೂ ಅರಿಯದ ಮಗು: ಮಲತಂದೆ ಸೇರಿ ನಾಲ್ವರ ಬಂಧನ

0
394

ಬೆಳಗಾವಿ: ಮಲತಂದೆಯಿಂದಲೇ 3 ವರ್ಷದ ಬಾಲಕನನ್ನು ಹತ್ಯೆ ಮಾಡಿರುವಂತಹ ಘಟನೆ  ಬೈಲಹೊಂಗಲ ತಾಲೂಕಿನ ಹಾರಗೊಪ್ಪ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ ಮುಕೇಶ್ ಮಾಂಜಿ(3) ಮೃತ ಬಾಲಕ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ . ಮಗುವಿನ ತಾಯಿ ರಂಗೀಲಾ ದೂರು ನೀಡಿದ್ದು, ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡನೇ ಮದುವೆಯಾಗಿ ಬಿಹಾರ್​ದಿಂದ ಕೆಲಸಕ್ಕೆಂದು ಓರ್ವ ಮಹಿಳೆ ಬಂದಿದ್ದು, ತನ್ನೊಟ್ಟಿಗೆ ಮೂರು ವರ್ಷದ ಮಗ ಕಾರ್ತಿಕ್​​ನನ್ನು ಕರೆದುಕೊಂಡು ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರೂಗೊಪ್ಪ ಬಳಿಯ ಹತ್ತಿ ಫ್ಯಾಕ್ಟರಿಯಲ್ಲಿ ಮಹಿಳೆ ಮತ್ತು ಎರಡನೇ ಗಂಡ ಕೆಲಸ ಮಾಡುತ್ತಿದ್ದರು.

ಮದ್ಯಸೇವಿಸಿ ಬಂದ ಗಂಡ ಮಹೇಶ್ವರ್ ಮಾಂಜಿ ನಿನ್ನ ಮಗನನ್ನು ಯಾಕೆ ಕರೆದುಕೊಂಡು ಬಂದಿದ್ಯಾ ಅಂತಾ ಹೆಂಡತಿ ಜೊತೆ ಜಗಳ ಮಾಡಿದ್ದಾರೆ. ಗಂಡನೊಟ್ಟಿಗೆ ಮೂರು ಜನ ಸೇರಿಕೊಂಡು ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮೂರು ವರ್ಷದ ಮಗನನ್ನು ಬಿಟ್ಟು ತಾಯಿ ಓಡಿಹೋಗಿದ್ದಾರೆ. ಅಲ್ಲೇ ಇದ್ದ ಮಗು ಕಾರ್ತಿಕ್ ಮೇಲೆ ರಾಕ್ಷಸಿ ವರ್ತನೆ ತೋರಿದ್ದಾರೆ. ಕಟ್ಟಿಗೆಯಿಂದ ಹೊಡೆದು ಎಲ್ಲೆಂದರಲ್ಲಿ ಸುಟ್ಟು ಭೀಕರವಾಗಿ ಹತ್ಯೆ ಮಾಡಿದ್ದಾರೆ. ತಾಯಿ ವಾಪಸ್ ಮನೆಗೆ ಬಂದಾಗ ಮಗ ಕಾರ್ತಿಕ್ ಹತ್ಯೆ ಬೆಳಕಿಗೆ‌ ಬಂದಿದೆ.

ಈ ಬಗ್ಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿದ್ದು, ಬೈಲಹೊಂಗಲ ತಾಲೂಕಿನ ಹಾರಗೊಪ್ಪ ಗ್ರಾಮದಲ್ಲಿ ಮಲತಂದೆ ಸೇರಿ ಸಂಗಡಿಗರು ಸೇರಿ 3 ವರ್ಷದ ಮಗುವನ್ನು ಕೊಂದಿದ್ದಾರೆ. ಮಗುವಿನ ತಾಯಿ ರಂಗೀಲಾ ದೂರು ಕೊಟ್ಟಿದ್ದಾರೆ. ಮಹೇಶ್ವರ ಮಾಂಜಿ ಎಂಬಾತನನ್ನು ರಂಗೀಲಾ 2ನೇ ಮದುವೆ ಆಗಿದ್ದರು ಎಂದು ಹೇಳಿದ್ದಾರೆ.

ಬಿಹಾರ ಮೂಲದ ದಂಪತಿ ಕೆಲಸಕ್ಕೆಂದು ಹಾರಗೊಪ್ಪಗೆ ಬಂದಿದ್ದಾರೆ. ಮಗುವನ್ನ ಕರೆದುಕೊಂಡು ಯಾಕೆ ಬಂದೇ ಅಂತಾ ಜಗಳ ತೆಗೆದಿದ್ದಾನೆ. ಈ ವೇಳೆ ಮಹೇಶ್ವರ್​​ಗೆ ಸ್ನೇಹಿತರು ಕೂಡ ಜಗಳಕ್ಕೆ ಸಾಥ್ ಕೊಟ್ಟಿದ್ದಾರೆ. ನಾಲ್ವರು ಸೇರಿಕೊಂಡು ರಂಗೀಲಾ ಮೇಲೆ ಹಲ್ಲೆಗೆ ಮುಂದಾಗಿದ್ದು, ತನ್ನನ್ನು ಕೊಲೆ ಮಾಡ್ತಾರೆ ಅಂತಾ ಹೆದರಿ ರಂಗೀಲಾ ಓಡಿ ಹೋಗಿದ್ದಾರೆ. ಈ ವೇಳೆ 3 ವರ್ಷದ ಮಗುವನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಆಗ ನಾಲ್ವರು ಸೇರಿ ಕಟ್ಟಿಗೆಯಿಂದ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಬೆಂಕಿಯಿಂದ ಎಲ್ಲೆಂದರಲ್ಲಿ ಸುಟ್ಟಿದ್ದಾರೆ. ರಂಗೀಲಾ ಮನೆಗೆ ವಾಪಸ್ ಬಂದಾಗ ಮಗು ಸತ್ತಿರೋದು ಗೊತ್ತಾಗಿದೆ ಎಂದಿದ್ದಾರೆ.

ತಕ್ಷಣ ಅಕ್ಕಪಕ್ಕದ ಜನರನ್ನು ಮಗುವಿನ ತಾಯಿ ಸೇರಿಸಿದ್ದಾಳೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹೇಶ್ವರ್ ಮಾಂಜಿ, ರಾಕೇಶ್ ಮಾಂಜಿ, ಶ್ರೀನಾಥ್ ಮಾಂಜಿ, ಮಹೇಶ್​ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here