ಸೈಂಟ್ ಅಲೋಸಿಯಸ್ ಹೈಸ್ಕೂಲ್‌ನ ನಿವೃತ್ತ ಶಿಕ್ಷಕಿ ಉಷಾ ಕುಮಾರಿ ನಿಧನ

0
21

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ವಿಜಯವಾಣಿ ಪತ್ರಿಕೆಯ ವರದಿಗಾರ ಪಿ.ಬಿ. ಹರೀಶ್ ರೈ ಅವರ ಧರ್ಮಪತ್ನಿ ಉಷಾ ಕುಮಾರಿ (56) ಅವರು ಅಕ್ಟೋಬರ್ 24ರ ಶನಿವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಂಗಳೂರಿನ ಸೈಂಟ್ ಅಲೋಸಿಯಸ್ ಹೈಸ್ಕೂಲಿನಲ್ಲಿ 28 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಉಷಾ ಕುಮಾರಿ ಅವರು, ಅದಕ್ಕೂ ಮೊದಲು ಮಂಗಳೂರಿನ ಚಿನ್ಮಯ ಹೈಸ್ಕೂಲ್ ಹಾಗೂ ಉಳ್ಳಾಲದ ಭಾರತ್ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಮ್ಮ ಸೇವೆಯನ್ನು ಸಮರ್ಪಿಸಿದ್ದ ಅವರು, ಕೆಲ ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಮೃತರು ಪತಿ ಪಿ.ಬಿ. ಹರೀಶ್ ರೈ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಉಷಾ ಕುಮಾರಿ ಅವರ ನಿಧನಕ್ಕೆ ರಾಜ್ಯ ಸಚಿವ ಯು.ಟಿ. ಖಾದರ್, ಕನ್ನಡಿಗ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕದ ನಿಕಟಪೂರ್ವ ಅಧ್ಯಕ್ಷ ರೋನ್ಸ್ ಬಂಟ್ವಾಳ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಮಾಜಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ. ಶಿವ ಮೂಡಿಗೆರೆ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.