ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಸಮಾರೋಪ

0
2

ಭಜನೆಯಿಂದ ಭಗವಂತನ ಸಾಕ್ಷಾತ್ಕಾರ, ಉತ್ತಮ ಸಂಸ್ಕಾರ: ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ

ಉಜಿರೆ: ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗವಾಗಿದ್ದು, ಶ್ರದ್ಧೆ ಮತ್ತು ಭಕ್ತಿಯಿಂದ ರಾಗ, ತಾಳ, ಲಯಬದ್ಧವಾಗಿ ಭಜನೆ ಹಾಡುವುದರಿಂದ ಭಗವಂತನ ಸಾಕ್ಷಾತ್ಕಾರವಾಗಿ ಭಜಕರಲ್ಲಿ ಉತ್ತಮ ಸಂಸ್ಕಾರ ಮೂಡುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 28ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಭಜನೆಯಿಂದ ನಮ್ಮಲ್ಲಿರುವ ಸಾತ್ವಿಕ ಶಕ್ತಿ ಜಾಗೃತವಾಗಿ ನೈತಿಕತೆ ಬೆಳೆದು ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಪ್ರಾರ್ಥನೆ, ಜಪ, ತಪ ಹಾಗೂ ಧ್ಯಾನದ ಮೂಲಕ ಭಕ್ತರು ಮತ್ತು ಭಗವಂತನ ನಡುವೆ ಅವಿನಾಭಾವ ಸಂಬಂಧ ಮೂಡುತ್ತದೆ ಎಂದು ಸ್ವಾಮೀಜಿ ತಿಳಿಸಿದರು. ಜನಮಂಗಳ ಕಾರ್ಯಗಳ ಮೂಲಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ‘ರಾಜರ್ಷಿ’ಯಾಗಿ ರೂಪುಗೊಂಡಿರುವುದು ಸಂತಸದ ಸಂಗತಿ ಎಂದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕೆ ಕೃಷಿ ಸಂಸ್ಕೃತಿ ಮತ್ತು ಋಷಿ ಸಂಸ್ಕೃತಿಯನ್ನು ಮರೆಯಬಾರದು. ಭಜನೆಯಿಂದ ನಾಲಗೆ ಪವಿತ್ರವಾಗಿ ಸಾರ್ಥಕ ಬದುಕಿಗೆ ಪ್ರೇರಣೆ ದೊರೆಯುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಿಬಿರಾರ್ಥಿಗಳು ಕಮ್ಮಟದಲ್ಲಿ ಪಡೆದ ಅನುಭವ ಹಾಗೂ ತರಬೇತಿಯನ್ನು ತಮ್ಮ ಊರುಗಳಲ್ಲಿ ಸದುಪಯೋಗಪಡಿಸಿಕೊಂಡು ಸಮಾಜದ ಪ್ರಗತಿಗೆ ಕೈಜೋಡಿಸಬೇಕು. ಪ್ರತಿನಿತ್ಯ ರಾಗ, ತಾಳ ಮತ್ತು ಲಯಬದ್ಧವಾಗಿ ಭಜನೆ ಹಾಡುವ ಮೂಲಕ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಕಮ್ಮಟದಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ಸಂಪನ್ಮೂಲ ವ್ಯಕ್ತಿಗಳು ಮತ್ತು ಹಿರಿಯ ವಿದ್ವಾಂಸರನ್ನು ಅಭಿನಂದಿಸಿದರು.

ಸಮಾರೋಪದ ಅಂಗವಾಗಿ ಶಿಬಿರಾರ್ಥಿಗಳಿಂದ ಸಾಮೂಹಿಕ ನೃತ್ಯ ಭಜನೆ ಹಾಗೂ ಕುಣಿತ ಭಜನೆ ನಡೆಯಿತು. ಒಂದು ವಾರ ನಡೆದ ಭಜನಾ ಕಮ್ಮಟದಲ್ಲಿ 107 ಪುರುಷರು ಹಾಗೂ 105 ಮಹಿಳೆಯರು ಸೇರಿದಂತೆ ಒಟ್ಟು 212 ಶಿಬಿರಾರ್ಥಿಗಳು ಭಾಗವಹಿಸಿದ್ದರು ಎಂದು ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ನೀಡಿದರು.

ಬ್ರಹ್ಮಾವರದ ತಿಮ್ಮಪ್ಪ ಕರ್ಕೇರಾ ಹಾಗೂ ಸುಳ್ಯದ ಶ್ರೀಲತಾ ಕಮ್ಮಟದ ಕುರಿತು ತಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾಹರ್ಷೇಂದ್ರ ಕುಮಾರ್, ಐಶ್ವರ್ಯನಿಶ್ಚಲ್ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ರತ್ನವರ್ಮ ಜೈನ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.