ಚೇತನಾ ವಿಶೇಷ ಶಾಲೆಯಲ್ಲಿ ವಾಕ್ ಮತ್ತು ಶ್ರವಣತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

0
5

ಕಾರ್ಕಳ: ಸೇವಾಕ್ಷೇತ್ರದ ಮುಂದುವರಿದ ಅಂಗವಾಗಿ ಚೇತನಾ ವಿಶೇಷ ಶಾಲೆಯಲ್ಲಿ ಕಾರ್ಯಾಚರಿಸುತ್ತಿರುವ ವಾಕ್ ಮತ್ತು ಶ್ರವಣ ಚಿಕಿತ್ಸಾ ಘಟಕ ಹಾಗೂ ಮಂಗಳೂರಿನ ದೇರಳಕಟ್ಟೆಯ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವಾಕ್ ಮತ್ತು ಶ್ರವಣ ವಿಭಾಗದ ಸಹಯೋಗದಲ್ಲಿ ಸೆ.30ರಂದು ಉಚಿತ ವಾಕ್–ಶ್ರವಣದೋಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಅಶ್ವತ್ ಎಸ್.ಎಲ್. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವಿಶೇಷ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ಒದಗಿಸುವ ಚೇತನಾ ವಿಶೇಷ ಶಾಲೆಯ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು.

ಯೆನಪೋಯ ವಾಕ್ ಮತ್ತು ಶ್ರವಣ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಸ್ವಾತಿ ಚಿನ್ನಸ್ವಾಮಿ, ಅಸೋಸಿಯೇಟ್ ಪ್ರೊಫೆಸರ್ ಮೆರಿನ್ ಮ್ಯಾಥ್ಯೂ ಹಾಗೂ ಕ್ಲಿನಿಕಲ್ ಸೂಪರ್‌ವೈಸರ್ ಅನನ್ಯಾ ರಮೇಶ್ ಅವರ ತಂಡವು ವಿದ್ಯಾರ್ಥಿಗಳಿಗೆ ವಾಕ್ ಮತ್ತು ಶ್ರವಣದೋಷ ತಪಾಸಣೆ ನಡೆಸಿ, ಅಗತ್ಯ ಚಿಕಿತ್ಸಾ ಸಲಹೆ ಹಾಗೂ ಮಾರ್ಗದರ್ಶನ ನೀಡಿತು.

ಕಾರ್ಯಕ್ರಮದಲ್ಲಿ ಭಾರತೀ ಸೇವಾ ಮಂಡಳಿ ಟ್ರಸ್ಟ್‌ನ ಕಾರ್ಯದರ್ಶಿ ರಘುನಾಥ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್, ವಿದ್ಯಾರ್ಥಿಗಳ ಹೆತ್ತವರು ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ರಘುನಾಥ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮಾ| ಕಿರಣ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕೋಶಾಧಿಕಾರಿ ವಿಜಯ್ ಕುಮಾರ್ ವಂದಿಸಿದರು.