ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್(76) ಕೊನೆಯುಸಿರೆಳೆದಿದ್ದಾರೆ. ನೂರಾರು ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ಅವರು ಪ್ರೇಕ್ಷಕರನ್ನು ರಂಜಿಸಿದ್ದರು. ರಾತ್ರಿ 2.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ಧನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧವಶರಾಗಿದ್ದಾರೆ.
ಸುಲ್ತಾನ್ ಪಾಳ್ಯದಲ್ಲಿರುವ ನಿವಾಸದಲ್ಲಿ ಬ್ಯಾಂಕ್ ಜನಾರ್ಧನ್ ಪಾರ್ಥೀವ ಶರೀರ ಇರಿಸಲಾಗಿದೆ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ಅವರು ಬಣ್ಣ ಹಚ್ಚಿದ್ದರು. 80 ಹಾಗೂ 90ರ ದಶಕದಲ್ಲಿ ಬಹುಬೇಡಿಕೆಯ ಹಾಸ್ಯ ಎನಿಸಿಕೊಂಡಿದ್ದರು. ಕನ್ನಡ ಕಿರುತೆರೆಯಲ್ಲಿ ಕೂಡ ಬ್ಯಾಂಕ್ ಜನಾರ್ಧನ್ ಮಿಂಚಿದ್ದರು.
ಜಗ್ಗೇಶ್ ಹಾಗೂ ಬ್ಯಾಂಕ್ ಜನಾರ್ಧನ್ ಕಾಂಬಿನೇಷನ್ ಹಿಟ್ ಆಗಿತ್ತು. ಕೆಲ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. 22 ವರ್ಷಗಳ ಹಿಂದೆ ಹೃದಯಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿ ಬ್ಯಾಂಕ್ ಜನಾರ್ಧನ್ ಚಿಕಿತ್ಸೆ ಪಡೆದಿದ್ದರು. ಅದೇ ಸಮಯದಲ್ಲಿ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ವಯಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.
‘ಶ್’ ಚಿತ್ರದ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬ್ಯಾಂಕ್ ಜನಾರ್ಧನ್ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು. ಸಂಜೆ ವೇಳೆಗೆ ಜನಾರ್ಧನ್ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.
1948ರಲ್ಲಿ ಹೊಳಲ್ಕೆರೆಯಲ್ಲಿ ಹುಟ್ಟಿ ಬೆಳೆದವರು ಜನಾರ್ಧನ್. 1985ರಲ್ಲಿ ತೆರೆಕಂಡ ‘ಪಿತಾಮಹ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಬ್ಯಾಂಕ್ ಉದ್ಯೋಗಿ ಆಗಿದ್ದ ಜನಾರ್ಧನ್ ಸಂಬಳ ಸಾಲದೇ ಬಣ್ಣದಲೋಕದಲ್ಲಿ ತೊಡಗಿಸಿಕೊಂಡಿದ್ದರು. ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’,’ಶ್’ ‘ಬೆಳ್ಳಿಯಪ್ಪ ಬಂಗಾರಪ್ಪ’, ‘ಗಣೇಶ ಸುಬ್ರಮಣ್ಯ’, ‘ಕೌರವ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ‘ಪಾಪಪಾಂಡು’, ‘ಮಾಂಗಲ್ಯ’, ‘ರೋಬೋ ಫ್ಯಾಮಿಲಿ’, ‘ಜೋಕಾಲಿ’ ಅವರು ನಟಿಸಿದ ಧಾರಾವಾಹಿಗಳು.
3 ಬಾರಿ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತವಾಗಿತ್ತು. ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಶಿವರಾಜ್‌ಕುಮಾರ್, ರವಿಚಂದ್ರನ್, ಶಂಕರ್ ನಾಗ್, ಅನಂತ್ ನಾಗ್ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸಿದ್ದಾರೆ. ದೊಡ್ಡಮಟ್ಟಕ್ಕೆ ಅವಕಾಶಗಳು ಸಿಗದೇ ಇದ್ದರೂ ಸಿಕ್ಕ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿ ಗೆದ್ದಿದ್ದರು. ಶಾಲಾ ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಹಾಗಾಗಿ ಕೊನೆಗೆ ಚಿತ್ರರಂಗ ಪ್ರವೇಶಿಸಿದರು. ಉಪೇಂದ್ರ ಹಾಗೂ ಕಾಶಿನಾಥ್ ಸಿನಿಮಾಗಳಲ್ಲಿ ಒಳ್ಳೆ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು.