ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದಲ್ಲಿ ಇಂದು ಸಾಯಂಕಾಲ ಬೀಸಿದ ಗಾಳಿ ಸಹಿತ ಮಳೆಯಿಂದ ಅಮನಬೆಟ್ಟು ಪ್ರದೇಶದಲ್ಲಿ ಭಾರೀ ಹಾನಿ ಸಂಭವಿಸಿದೆ.
ಗ್ರಾಮ ಅಸ್ರಣ್ಣರಾದ ಅನಂತ ಅಸ್ರಣ್ಣರವರ ಮನೆಯ ತೋಟದಲ್ಲಿ ಹೆಚ್ಚಿನ ಪ್ರಮಾಣದ ತೆಂಗು ಹಾಗೂ ಇತರ ಬೆಳೆಗಳು ಗಾಳಿಗೆ ಉರುಳಿ ಹಾನಿಗೊಳಗಾಗಿವೆ. ಮಾಜಿ ಪಂಚಾಯತ್ ಅಧ್ಯಕ್ಷೆ ಸಂಜೀವಿ ಪೂಜಾರಿ ಅವರ ಮನೆಯ ಮಾಡು ಕೂಡ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಮುರಗೋಳಿ ಪ್ರದೇಶದಲ್ಲಿ ಮರ ಉರುಳಿ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿರುವ ಸಾಧ್ಯತೆ ಇದೆ. ಈ ಭಾಗದ ಹಲವೆಡೆ ಕೃಷಿ ಭೂಮಿ, ಮನೆಗಳು ಹಾಗೂ ಇತರೆ ಕಟ್ಟಡಗಳಿಗೂ ಹಾನಿ ಸಂಭವಿಸಿದೆ.

ಘಟನೆಯ ಬಗ್ಗೆ ತಿಳಿದ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿಯವರು ಸಂಬಂಧಿತ ಇಲಾಖೆಗೆ ಮಾಹಿತಿ ನೀಡಿ ತಕ್ಷಣದ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

