ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ಭೀಕರ ಘಟನೆೊಂದು ಬೆಳಕಿಗೆ ಬಂದಿದೆ. ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದ ಮಹಿಳೆಯ ಮೇಲೆ ಪ್ರಿಯಕರ ಕ್ರೂರವಾಗಿ ಹಲ್ಲೆ ನಡೆಸಿ, ಆಕೆಯ ಸಾವಿಗೆ ಕಾರಣನಾಗಿದ್ದಾನೆ.
ಮೃತ ಮಹಿಳೆಯನ್ನು ರಮ್ಯಾ.ಎ.ಆರ್ (35) ಎಂದು ಗುರುತಿಸಲಾಗಿದ್ದು, ಆರೋಪಿ ಚಂದ್ರ (41) ಅದೇ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ರಮ್ಯಾ ವಿಧವೆಯಾಗಿದ್ದು, ಬೆಂಗಳೂರಿನಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿದ್ದರು. ಚಂದ್ರನೊಂದಿಗೆ ಅವಳಿಗೆ ಸಂಬಂಧವಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಏಪ್ರಿಲ್ 28ರಂದು ಅತ್ತೆಯ ಅಂತ್ಯಸಂಸ್ಕಾರಕ್ಕಾಗಿ ರಮ್ಯಾ ಸ್ವಗ್ರಾಮಕ್ಕೆ ಬಂದಿದ್ದರು. ಈ ವೇಳೆ ರಾತ್ರಿ ಮನೆಗೆ ಬಂದ ಚಂದ್ರ, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ರಮ್ಯಾ ಇದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಚಂದ್ರ, ಆಕೆಯ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ವಿಶೇಷವಾಗಿ ಮರ್ಮಾಂಗಕ್ಕೆ ಹೊಡೆತ ನೀಡಿದ್ದಾನೆ ಎಂದು ಹೇಳಲಾಗಿದೆ.
ಎರಡು ದಿನಗಳ ನಂತರ, ಏಪ್ರಿಲ್ 30ರಂದು ರಮ್ಯಾಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಚಂದ್ರನನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.

