ವಿಶ್ವದ ಸುದೀರ್ಘ ಬಸ್ ಪ್ರಯಾಣ:-ಲಂಡನ್ ಟು ಕಲ್ಕತ್ತಾ – ಒಂದು ರೋಚಕ ಇತಿಹಾಸ

0
20

ವರದಿ : ಮಂದಾರ ರಾಜೇಶ್ ಭಟ್

​ಇಂದಿನ ವಿಮಾನಯಾನದ ಯುಗದಲ್ಲಿ ದೇಶ-ವಿದೇಶಗಳ ನಡುವಿನ ಅಂತರ ಗಂಟೆಗಳಿಗೆ ಸೀಮಿತವಾಗಿದೆ. ಆದರೆ, 1950 ರಿಂದ 1970ರ ದಶಕದ ಅವಧಿಯಲ್ಲಿ ಭಾರತದ ಕಲ್ಕತ್ತಾ ಮತ್ತು ಇಂಗ್ಲೆಂಡ್‌ನ ಲಂಡನ್ ನಡುವೆ ರಸ್ತೆಯ ಮೂಲಕವೇ ಜಗತ್ತನ್ನು ಸುತ್ತುವ ಅದ್ಭುತ ಸಾಹಸವೊಂದು ಅಸ್ತಿತ್ವದಲ್ಲಿತ್ತು. ಇದು ವಿಶ್ವದ ಅತಿ ಉದ್ದದ ಬಸ್ ಮಾರ್ಗವೆಂದು ಇತಿಹಾಸದಲ್ಲಿ ದಾಖಲಾಗಿದೆ.

​ಆಲ್ಬರ್ಟ್ ಟ್ರಾವೆಲ್ಸ್ ಎಂಬ ಚಲಿಸುವ ಮನೆ

1957ರಲ್ಲಿ ಆಂಡಿ ಸ್ಟೀವರ್ಟ್ ಎಂಬುವವರು ‘ಆಲ್ಬರ್ಟ್ ಟ್ರಾವೆಲ್ಸ್’ ಸಂಸ್ಥೆಯ ಮೂಲಕ ಈ ಸೇವೆಯನ್ನು ಆರಂಭಿಸಿದರು. ‘ಆಲ್ಬರ್ಟ್’ ಎಂಬ ಹೆಸರಿನ ಈ ಬಸ್ ಕೇವಲ ವಾಹನವಾಗಿರದೆ, ಪ್ರವಾಸಿಗರಿಗೆ ಒಂದು ಚಲಿಸುವ ಮನೆಯಂತಿತ್ತು. ಭಾರತದಿಂದ ಹೊರಟು ಲಂಡನ್ ತಲುಪಲು ಸುಮಾರು 13000 ಕಿಲೋಮೀಟರ್‌ಗಳಷ್ಟು ದೂರದ ಈ ಪ್ರಯಾಣವನ್ನು ಪೂರ್ಣಗೊಳಿಸಲು ಸುಮಾರು 50 ದಿನಗಳು ಬೇಕಾಗುತ್ತಿದ್ದವು ಕೆಲವೊಮ್ಮೆ ಹವಾಮಾನ ಮತ್ತು ಇತರ ಕಾರಣಗಳಿಗಾಗಿ ಇನ್ನು ಹೆಚ್ಚಿನ ದಿನಗಳು ಬೇಕಾಗುತ್ತಿದ್ದವು ಎಂದು ದಾಖಲೆಗಳು ತಿಳಿಸುತ್ತವೆ

​ಹಲವು ದೇಶಗಳ ಸೌಂದರ್ಯ ಸವಿಯುವ ಹಾದಿ

ಈ ಬಸ್ ಪ್ರಯಾಣವು ಕಲ್ಕತ್ತಾದಿಂದ ಹೊರಟು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಟರ್ಕಿ, ಗ್ರೀಸ್, ಬಲ್ಗೇರಿಯಾ, ಯುಗೊಸ್ಲಾವಿಯಾ, ಆಸ್ಟ್ರಿಯಾ, ಪಶ್ಚಿಮ ಜರ್ಮನಿ, ಬೆಲ್ಜಿಯಂ ಮತ್ತು ಫ್ರಾನ್ಸ್ ಸೇರಿದಂತೆ ಒಟ್ಟು 11ಕ್ಕೂ ಹೆಚ್ಚು ದೇಶಗಳ ಮೂಲಕ ಹಾದುಹೋಗುತ್ತಿತ್ತು. ಅಂತಿಮವಾಗಿ ಫ್ರಾನ್ಸ್‌ನಿಂದ ಇಂಗ್ಲಿಷ್ ಚಾನೆಲ್ ಅನ್ನು ದೋಣಿಯ ಮೂಲಕ ದಾಟಿ ಲಂಡನ್ ತಲುಪುತ್ತಿತ್ತು.

​ಬಸ್ಸಿನೊಳಗಿನ ಐಷಾರಾಮಿ ಸೌಲಭ್ಯಗಳು

ಆ ಕಾಲಕ್ಕೆ ಈ ಬಸ್ಸಿನಲ್ಲಿ ನೀಡಲಾಗುತ್ತಿದ್ದ ಸೌಲಭ್ಯಗಳು ಬೆರಗುಗೊಳಿಸುವಂತಿದ್ದವು. ಪ್ರಯಾಣಿಕರಿಗೆ ಮಲಗಲು ಆರಾಮದಾಯಕ ಬಂಕ್ ಬೆಡ್‌ಗಳು, ಬಿಸಿನೀರು, ಅಡುಗೆ ಮಾಡಲು ಸಣ್ಣ ಕಿಚನ್ ಮತ್ತು ಮನರಂಜನೆಗಾಗಿ ರೇಡಿಯೋ ವ್ಯವಸ್ಥೆ ಇತ್ತು.

ಬಸ್ಸಿನ ಮೇಲ್ಭಾಗದಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಸವಿಯಲು ‘ಅಪ್ಪರ್ ಡೆಕ್’ ಸೌಲಭ್ಯವನ್ನೂ ನೀಡಲಾಗಿತ್ತು. ಆ ಕಾಲದಲ್ಲಿ ಈ ಸಾಹಸಮಯ ಪ್ರಯಾಣದ ಟಿಕೆಟ್ ದರ ಸುಮಾರು 145 ಪೌಂಡ್ ಆಗಿತ್ತು.

​ಸೇವೆಯ ಸ್ಥಗಿತಕ್ಕೆ ಕಾರಣಗಳು

ಸುಮಾರು ಎರಡು ದಶಕಗಳ ಕಾಲ ಯಶಸ್ವಿಯಾಗಿ ನಡೆದ ಈ ಸೇವೆ 1970ರ ನಂತರ ಸ್ಥಗಿತಗೊಂಡಿತು. ಇರಾನ್‌ನಲ್ಲಿ ಉಂಟಾದ ರಾಜಕೀಯ ಕ್ರಾಂತಿ, ಅಫ್ಘಾನಿಸ್ತಾನದ ಮೇಲೆ ಸೋವಿಯತ್ ರಷ್ಯಾದ ಆಕ್ರಮಣ ಮತ್ತು ಭಾರತ-ಪಾಕಿಸ್ತಾನ ನಡುವಿನ ಯುದ್ಧಗಳಿಂದಾಗಿ ಅಂತರಾಷ್ಟ್ರೀಯ ಗಡಿಗಳು ಮುಚ್ಚಲ್ಪಟ್ಟವು. ಇದು ಈ ಸುದೀರ್ಘ ಬಸ್ ಪ್ರಯಾಣದ ಅಂತ್ಯಕ್ಕೆ ಕಾರಣವಾಯಿತು.

ಇತಿಹಾಸದ ಸುವರ್ಣ ಅಧ್ಯಾಯ

ಇಂದು ಲಂಡನ್‌ನಿಂದ ಭಾರತಕ್ಕೆ ರಸ್ತೆಯ ಮೂಲಕ ಹೋಗುವುದು ಕೇವಲ ಒಂದು ಕನಸಿನಂತೆ ಕಾಣಬಹುದು. ಆದರೆ ಅಂದಿನ ಪತ್ರಿಕಾ ವರದಿಗಳು ಮತ್ತು ಬ್ರಿಟಿಷ್ ಮ್ಯೂಸಿಯಂನಲ್ಲಿರುವ ದಾಖಲೆಗಳು ಆಧುನಿಕ ಮಾಧ್ಯಮದಲ್ಲಿ ಪ್ರಸಾರವಾದ ವಿವರಗಳು ಈ ಅದ್ಭುತ ಪ್ರಯಾಣಕ್ಕೆ ಸಾಕ್ಷಿಯಾಗಿವೆ. ಇದನ್ನು ಇತಿಹಾಸದಲ್ಲಿ “ಹಿಪ್ಪಿ ಟ್ರೈಲ್” ಎಂದೂ ಕರೆಯಲಾಗುತ್ತದೆ. ಆಲ್ಬರ್ಟ್ ಬಸ್ಸಿನ ಕಥೆಗಳು ಮಾನವನ ಸಾಹಸ ಪ್ರವೃತ್ತಿ ಮತ್ತು ಜಗತ್ತನ್ನು ಹತ್ತಿರದಿಂದ ನೋಡುವ ಆಸೆಗೆ ಇಂದಿಗೂ ದ್ಯೋತಕವಾಗಿವೆ.

LEAVE A REPLY

Please enter your comment!
Please enter your name here