ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ₹571.79 ಕೋಟಿ ಅನುದಾನ

0
77

ಪುತ್ತೂರು : ಶಾಸಕ ಅಶೋಕ್ ರೈ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದಂತೆ ₹571.79 ಕೋಟಿ ಅನುದಾನಕ್ಕೆ ಇಂದು ಆಡಳಿತಾತ್ಮಕ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.

ಇಂದು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅಗತ್ಯವಿರುವ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆಯಲಿದ್ದು, ಇದರೊಂದಿಗೆ ಕಾಲೇಜು ನಿರ್ಮಾಣ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯಲಿದೆ ಎಂದು ತಿಳಿದುಬಂದಿದೆ.

ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಶಾಸಕ ಅಶೋಕ್ ರೈ ಅವರು ಕಳೆದ ವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಇಂದು ಅನುಮೋದನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಯೇ ಸಿದ್ಧ ಎಂಬುದು ಶಾಸಕ ಅಶೋಕ್ ರೈ ಅವರ ಚುನಾವಣಾ ಪೂರ್ವ ಭರವಸೆಯಾಗಿತ್ತು. ಕಳೆದ ಬಜೆಟ್ ಅಧಿವೇಶನದಲ್ಲಿ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಘೋಷಣೆಯಾಗುವ ಮೂಲಕ ಭರವಸೆಯ ಮೊದಲ ಹಂತ ಈಡೇರಿತ್ತು.

ಇದೀಗ ₹571.79 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆಯುವ ಮೂಲಕ ಯೋಜನೆ ಕಾರ್ಯರೂಪಕ್ಕೆ ಬರುವ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳ್ಳಲಿದೆ.

ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹುವರ್ಷಗಳ ಸರಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಈ ಮೂಲಕ ಸಾಕಾರಗೊಳ್ಳುವ ನಿರೀಕ್ಷೆ ಮೂಡಿದೆ. ವೈದ್ಯಕೀಯ ಶಿಕ್ಷಣದ ಅವಕಾಶಗಳು ಹೆಚ್ಚುವುದರ ಜೊತೆಗೆ, ಸ್ಥಳೀಯವಾಗಿ ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗಲು ಯೋಜನೆ ಸಹಕಾರಿಯಾಗಲಿದೆ.

ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಶಾಸಕ ಅಶೋಕ್ ರೈ ಅವರ ಪ್ರಮುಖ ಕನಸಿನ ಯೋಜನೆಗಳಲ್ಲಿ ಒಂದಾಗಿದ್ದು, ಅನುಮೋದನೆ ಹಾಗೂ ಮುಂದಿನ ಕಾಮಗಾರಿಗಳ ಪ್ರಗತಿಯತ್ತ ಇದೀಗ ಸಾರ್ವಜನಿಕರ ಗಮನ ನೆಟ್ಟಿದೆ.