ಮುನಿಯಾಲು ಶ್ರೀ ನಾಗ ದೇವರ ಸನ್ನಿಧಿಯಲ್ಲಿ 25ನೇ ವರ್ಧಂತ್ಯುತ್ಸವ. – ಭಜನಾ ಮಂಡಳಿ ಲೋಕಾರ್ಪಣೆ

0
5

ಪ್ರಯತ್ನ ಮತ್ತು ದೇವರ ದಯೆಯಿಂದ ಬದುಕು ಪಾವನ : ಪೇಜಾವರ ಶ್ರೀ

ಮುನಿಯಾಲು ಉದಯ ಕುಮಾರ್ ಶೆಟ್ಟಿಯವರ ಕನಸು ಆಶಯಗಳು ಈಡೇರಲಿ – ಪೇಜಾವರ ಶ್ರೀಪಾದರು.

ಮುನಿಯಾಲು : ನಾವು ಬದುಕಿನಲ್ಲಿ ಯಶಸ್ವಿಯಾಗಲು ವಿಶೇಷ ಪ್ರಯತ್ನ ಮಾಡಬೇಕು, ಆಗ ದೇವರ ದಯೆ ದೊರೆಯುತ್ತದೆ. ಬದುಕು ಪಾವನವಾಗಿ ಸಾರ್ಥಕ ವಾಗುತ್ತದೆ. ಮುನಿಯಾಲು ಭಕ್ತಸಮೂಹ ಒಂದಾಗಿ ನಾಗದೇವರ ಸೇವೆ ಮಾಡಿದ್ದರಿಂದ ಪುಣ್ಯ ದೊರೆಯುತ್ತದೆ. ಎಲ್ಲರ ಜೀವನ ಒಳ್ಳೇಯದಾಗಿ ಕನಸುಗಳು ನನಸಾಗಲಿ. ನಿರಂತರವಾಗಿ ಬಡವರ ಸೇವೆ ಸತ್ಕರ್ಮ ಮಾಡುತ್ತಿರುವ ಮುನಿಯಾಲು ಉದಯ ಕುಮಾರ್‌ ಶೆಟ್ಟಿಯವರ ಎಲ್ಲಾ ಕನಸು ನನಸಾಗಿ ಜನಸೇವೆ ಮಾಡುವಂತಾಗಲಿ ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾದೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚಿಸಿದರು.

ಅವರು ಗುರುವಾರ ಮುನಿಯಾಲು ಗಾಂಧಿ ಮೈದಾನದ ಪ್ರಾಕೃತಿಕ ಶ್ರೀ ನಾಗ ದೇವರ ಸನ್ನಿಧಿಯ ೨೫ನೇ ವರ್ಷದ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚಿಸಿದರು.
ಕಾರ್ಯಕ್ರಮದ ರೂವಾರಿ ಮುನಿಯಾಲು ಗಾಂಧಿ ಮೈದಾನದ ಪ್ರಾಕೃತಿಕ ಶ್ರೀ ನಾಗ ದೇವರ ಸನ್ನಿಧಿಯ ಮುಖ್ಯಸ್ಥರಾದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮಾತನಾಡಿ ಗ್ರಾಮೀಣ ಪ್ರದೇಶದ ಹಲವಾರು ಪ್ರತಿಭೆಗಳಿಗೆ ಪ್ರೇರಣೆ ಮತ್ತು ಅವಕಾಶ ನೀಡಿದ ಪುಣ್ಯದ ಮಣ್ಣು ಗಾಂಧಿಮೈದಾನ.

ಗಾಂಧಿಮೈದಾನದಲ್ಲಿ ಆಟವಾಡಿ ಕಲಿತ ಹಲವಾರು ಪ್ರತಿಭೆಗಳು ಒಂದು ರಾಷ್ಟ್ರೀಯ ಕ್ರೀಡಾತಾರೆಗಳಾಗಿ ಮಿಂಚಿದ್ದಾರೆ. ಹಳ್ಳಿಯ ಇನ್ನಷ್ಟು ಪ್ರತಿಭೆಗಳಿಗೆ ಮುನಿಯಾಲಿನ ಮಣ್ಣು ಪ್ರೇರಣೆಯಾಗಬೇಕು. ಅದಕ್ಕಾಗಿ ೫ ಕೋಟಿ ರೂಪಾಯಿ ಅನುದಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುವ ಕನಸು ಇದೆ. ಕ್ರೀಡೆ ಮತ್ತು ಶಿಕ್ಷಣಕ್ಕೆ ನಾವು ಪ್ರೋತ್ಸಾಹ ನೀಡಬೇಕಿದೆ. ಬಡವರಿಗೆ ಉಚಿತವಾಗಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ದೊರೆಯುವಂತಾಗಬೇಕು ಎಂದು ಆಶಿಸಿದ ಉದಯ ಕುಮಾರ್‌ ಶೆಟ್ಟಿಯವರು ಉಡುಪಿ ದಕ್ಷಿಣ ಕನ್ನಡ ಜಿಲ್ಲೆ ಭೂಲೋಕದ ಸ್ವರ್ಗ. ದೇವ ನಿರ್ಮಿತ ಪ್ರದೇಶ. ಇಲ್ಲಿ ನಾವು ಇರುವುದೇ ಸೌಭಾಗ್ಯ ಎಂದರು.

ಮುನಿಯಾಲು ಶ್ರೀ ಮಹಾಗಣಪತಿ ಸೇವಾ ಸಮಿತಿಯ ಸಂಸ್ಥಾಪಕರಾದ ಪಿ. ಸುಧಾಕರ ಶೆಟ್ಟಿ ಮಾತನಾಡಿ ಗಾಂಧಿ ಮೈದಾನ ಶ್ರೀ ನಾಗ ದೇವರ ಸನ್ನಿಧಿಯಿಂದ ಎಲ್ಲರಿಗು ಒಳತಾಗಿ ಪವಿತ್ರವಾಗಿ ಬೆಳಗಲಿದೆ ಎಂದು ಆಶಿಸಿದರು.

ಮುನಿಯಾಲು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಗೋಪಿನಾಥ ಭಟ್‌ ಮಾತನಾಡಿ ನಾಗದೇವರ ಸ್ಮರಣೆಗಾಗಿ ಮುನಿಯಾಲಿನಲ್ಲಿ ಭಜನಾ ಮಂಡಳಿಯನ್ನು ಸ್ಥಾಪಿಸಲಾಗಿದೆ. ಆಮೂಲಕ ದೇವರ ಸೇವೆಯನ್ನು ಮಂಡಳಿಯು ಮಾಡಲಿದೆ. ಗಾಂಧಿಮೈದಾನದ ಜಾಗಕ್ಕೆ ವಿಶೇಷ ಶಕ್ತಿಯಿದೆ. ನಮ್ಮ ಪ್ರಾರ್ಥನೆಗಳೆಲ್ಲವೂ ಈಡೇರುತ್ತಿದೆ. ನಮಗೆಲ್ಲರಿಗೂ ಶ್ರೀ ನಾಗದೇವರ ಪೂರ್ಣಾನುಗ್ರಹ ಲಭಿಸಿದ ಫಲವಾಗಿ ಸೇವೆ ಸಲ್ಲಿಸಲು ಸಲ್ಲಿಸಲು ಸಾಧ್ಯವಾಗುತ್ತಿದೆ. ಮುಂದೆ ನಾಗದೇವರ ಸನ್ನಿಧಿಯು ಕಾರಣೀಕ ಕ್ಷೇತ್ರವಾಗಿ ಬೆಳಗಲಿದೆ ಎಂದರು.

ವೇದಮೂರ್ತಿ ಜಾರ್ಕಳ ಶ್ರೀ ಪ್ರಸಾದ್‌ ತಂತ್ರಿಯವರು ಮತ್ತು ನಾಗರಾಜ ಪುತ್ರಾಯ ಅವರ ನೇತ್ರತ್ವದಲ್ಲಿ ನವಕ ಪ್ರಧಾನ ಹೋಮ, ಆಶ್ಲೇಷಾ ಬಲಿ, ಪ್ರಸನ್ನ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು. ಸಾರ್ವಜನಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ ಮತ್ತು ತುಳು ನಾಟಕ ಪ್ರದರ್ಶನ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀವಾಸುಕಿ ನಾಗರಾಜ ಭಜನಾ ಮಂಡಳಿಯನ್ನು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾದೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಾಳ ಹಸ್ತಾಂತರಿಸಿ ಉದ್ಘಾಟಿಸಿದರು.

ಹಿರಿಯರಾದ ಮೂಡುಕುಡೂರು ನಡುಮನೆ ಬರ್ಕೆ ರಾಜು ಪೂಜಾರಿ, ಕಬಡ್ಡಿ ಕ್ರೀಡಾಪಟುಗಳು ಶೈಕ್ಷಣಿಕ ಸಾಧಕರಾದ ಸೃಜನ್‌ ಶೆಟ್ಟಿ ಮತ್ತು ಸವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮೂಡುಕುಡೂರು ಬೀಡಿನ ವಿಜಯ ಭಂಗ, ಮುನಿಯಾಲು ಶ್ರೀ ಮಹಾಗಣಪತಿ ಸೇವಾ ಸಮಿತಿಯ ಸಂಸ್ಥಾಪಕರಾದ ಪಿ. ಸುಧಾಕರ ಶೆಟ್ಟಿ, ಮುನಿಯಾಲು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಗೋಪಿನಾಥ ಭಟ್‌, ಮುನಿಯಾಲು ವಾಸುಕಿ ನಾಗರಾಜ ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷೆ ಸುಗಂಧಿ ನಾಯ್ಕ್‌, ಸಮಾಜ ಸೇವಕ ಮುಂಬೈ ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ, ಮುನಿಯಾಲು ಗಾಂಧಿ ಮೈದಾನ ಪ್ರಾಕೃತಿಕ ಶ್ರೀ ನಾಗ ದೇವರ ಸನ್ನಿಧಿ ಸೇವಾ ಸಮಿತಿ, ಮುನಿಯಾಲು ವಾಸುಕಿ ನಾಗರಾಜ ಭಜನಾ ಮಂಡಳಿ ಮತ್ತು ಮುನಿಯಾಲು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು, ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಮುನಿಯಾಲು ಶಿವಾನಂದ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ವೇತಾ ಆಚಾರ್ಯ ಮುನಿಯಾಲು ನಿರೂಪಿಸಿ ಪ್ರಸಾದ ಶೆಟ್ಟಿ ಮಾತಿಬೆಟ್ಟು ವಂದಿಸಿದರು.

ವರದಿ : ಸುಕುಮಾರ್ ಮುನಿಯಾಲ್

LEAVE A REPLY

Please enter your comment!
Please enter your name here