
ಮೂಡುಬಿದಿರೆ: ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದ ನಿವೃತ್ತ ಉದ್ಯೋಗಿ ಹಾಗೂ ಪ್ರಸಿದ್ಧ ಹವ್ಯಾಸಿ ಯಕ್ಷಗಾನ ಭಾಗವತ ಸಂಪಿಗೆ ಮಾಧವ ಆಚಾರ್ ಅವರು ಶನಿವಾರ ಬೆಳಿಗ್ಗೆ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಇತ್ತೀಚೆಗಷ್ಟೇ ವೃತ್ತಿಜೀವನದಿಂದ ನಿವೃತ್ತರಾಗಿದ್ದ ಅವರು, ಪತ್ನಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಮಾಧವ ಆಚಾರ್ ಅವರು, ಗೀತಾಂಬಿಕಾ ಯಕ್ಷಮೇಳದಲ್ಲಿ ನಾಲ್ಕು ವರ್ಷ ಹಾಗೂ ಇರುವೈಲು ಮೇಳದಲ್ಲಿ ಎರಡು ವರ್ಷಗಳ ಕಾಲ ತಿರುಗಾಟ ನಡೆಸಿದ್ದರು. ಜೊತೆಗೆ ಸುಂಕದಕಟ್ಟೆ ಮತ್ತು ಚೀರುಂಭ ಭಗವತೀ ಮೇಳಗಳಲ್ಲಿ ಬದಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದ್ದರು.
ಮೂಡುಬಿದಿರೆ ಪರಿಸರದ ಯಕ್ಷ ಸಂಗಮ ಯಕ್ಕೋತ್ಯಾನ, ಯಕ್ಷದೇವ ಮಿತ್ರ ಕಲಾ ಮಂಡಳಿ, ಯಕ್ಷಚೈತನ್ಯ ಅಮ್ನಾಯ ಯಕ್ಷ ಬಳಗ ಹಾಗೂ ಯಕ್ಕೋಪಾಸನಂ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಅವರು ಪ್ರಮುಖ ಭಾಗವತರಾಗಿ ಗುರುತಿಸಿಕೊಂಡಿದ್ದರು.
ಮೂಡುಬಿದಿರೆ ತಾಲೂಕಿನ ಹವ್ಯಾಸಿ ಕಲಾವಿದರ ತಾಳಮದ್ದಳೆ ಕೂಟಗಳಿಗೆ ಇವರೇ ಪ್ರಧಾನ ಭಾಗವತರಾಗಿದ್ದು, ವಾರ್ಷಿಕ ದೊಡ್ಡ ಕಾರ್ಯಕ್ರಮಗಳ ಮೊದಲ ಭಾಗದ ಭಾಗವತಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಹಿರಿಯ ಕಲಾವಿದರಿಂದ ಅಪಾರ ಮೆಚ್ಚುಗೆ ಗಳಿಸಿದ್ದ ಅವರು, ಬಲಿಪ ಮತ್ತು ಕಡತೋಕಾ ಶೈಲಿಯ ಗಾಯನದಲ್ಲಿ ಪರಿಣತಿ ಹೊಂದಿದ್ದರು.
