ದ ಕ ಜಿಲ್ಲಾಡಳಿತ, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮತ್ತು ಎಸ್ ಡಿ ಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಸಂಯುಕ್ತ ಆಶ್ರಯದಲ್ಲಿ ಮೇ 23 ರಂದು ಎಸ್ ಡಿ ಎಮ್ ಕಾನ್ಫರೆನ್ಸ್ ಹಾಲಿನಲ್ಲಿ ಗ್ರಾಹಕ ಸರ್ಟಿಫಿಕೇಟ್ ಕೋರ್ಸ್ ನ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ಪ್ರಧಾನ ಸಮಾರಂಭ ನಡೆಯಿತು.
ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಜೈಬುನ್ನೀಸಾ, ಕಾಲೇಜು ವಿದ್ಯಾರ್ಥಿಗಳು ಗ್ರಾಹಕ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುವುದರೊಂದಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಬಹಳ ಇದೆ. ಸಾರ್ವಜನಿಕರಿಗೆ ಮಾಹಿತಿಯನ್ನು ಕಾಲೇಜು ವಿದ್ಯಾರ್ಥಿಗಳು ತಲುಪಿಸುವುದರಿಂದ ಹೆಚ್ಚಿನ ಪ್ರಯೋಜನ ಸಾಮಾನ್ಯರಿಗೆ ಲಭಿಸಲು ಸಾಧ್ಯವಿದೆ.
ಒಕ್ಕೂಟ ಇಷ್ಟೊಂದು ಹೆಚ್ಚಿನ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿಯನ್ನು ನೀಡುತ್ತಿರುವುದು ಸಂತಸಕರ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು. ತಪ್ಪುಗಳನ್ನು ಸರಿಪಡಿಸುವ, ಮೋಸವನ್ನು ಹೋಗಲಾಡಿಸಿ ಸತ್ಯ, ನಿಷ್ಠ, ಬದ್ಧತೆಯ ಬದುಕನ್ನು ಸಾರ್ವಜನಿಕರಿಗೆ ಕೊಡ ಮಾಡುವ ಪ್ರಯತ್ನ ಎಲ್ಲರಿಂದಲೂ ಆಗಬೇಕಾಗಿದೆ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಎಸ್ ರಾಜ ಗ್ರಾಹಕ ಮಾಹಿತಿಯ ಪ್ರಯೋಜನ ಪ್ರತಿಯೊಬ್ಬರಿಗೂ ಲಭಿಸುವಂತಾಗಬೇಕೆಂದು ಕೇಳಿಕೊಂಡರು.
ಬ್ಯಾಂಕಿನಲ್ಲಿಯೂ ಕೂಡ ಒಮ್ಬುಡ್ಸ್ಮನ್ ಮೂಲಕ ಸಾಕಷ್ಟು ಪ್ರಾಮಾಣಿಕತೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಎಸ್ ಡಿ ಎಂ ಕಾಲೇಜು ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲ ಡಾ. ಭಾನುಪ್ರಕಾಶ್ ಬಿ ಇ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಸುನಂದ ಕುಂಬಳೆ, ಕಾರ್ಯದರ್ಶಿ ಸುನಂದ ದಂಡೆಕೋಡೆ, ಗೌರವಾಧ್ಯಕ್ಷ ಎಂಜೆ ಸಾಲಿಯಾನ್, ಉಪಾಧ್ಯಕ್ಷ ಎಡ್ವೀನ್ ಡಿ ಮೆಲೊ ಹಾಜರಿದ್ದರು. ಶ್ರೇಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ವರದಿ ರಾಯಿ ರಾಜ ಕುಮಾರ

