ನವದೆಹಲಿ: ಭಾರತದ ಆರ್ಥಿಕತೆಯು ಬಲಿಷ್ಠವಾಗಿ ಮುನ್ನುಗ್ಗುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. 2026 ರ ಮೇ ತಿಂಗಳ ದೇಶದ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಶೇಕಡಾ 3.2 ರಷ್ಟು ಪ್ರಗತಿ ಸಾಧಿಸಿದ್ದು, ಬರೋಬ್ಬರಿ 1.94 ಲಕ್ಷ ಕೋಟಿ ರೂ ತಲುಪಿದೆ. ದೇಶೀಯ ವಹಿವಾಟುಗಳಲ್ಲಿನ ಸ್ಥಿರತೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚುತ್ತಿರುವುದು ಈ ದಾಖಲೆಯ ಸಂಗ್ರಹಕ್ಕೆ ಪ್ರಮುಖ ಕಾರಣವಾಗಿದೆ. ನಿವ್ವಳ ಜಿಎಸ್‌ಟಿ (Net GST) ಆದಾಯದಲ್ಲೂ ಏರಿಕೆ ಆಗಿದೆ.
ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಮೇ 2026 ರ ನಿವ್ವಳ ಆದಾಯ 1.73 ಲಕ್ಷ ಕೋಟಿ ರೂ ಇದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೆಟ್ ಜಿಎಸ್‌ಟಿ ಕಲೆಕ್ಷನ್ಸ್ನಲ್ಲಿ ಶೇಕಡಾ 2.8 ರಷ್ಟು ಹೆಚ್ಚಳ ಆಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳುಗಳಲ್ಲಿ (ಏಪ್ರಿಲ್ ಮತ್ತು ಮೇ 2026) ಭಾರತದ ಒಟ್ಟು ಜಿಎಸ್‌ಟಿ ಸಂಗ್ರಹವು ಅತ್ಯಂತ ಆಶಾದಾಯಕವಾಗಿದೆ. ಎರಡು ತಿಂಗಳ ಒಟ್ಟು ಗ್ರಾಸ್ ಜಿಎಸ್‌ಟಿ, 4.04 ಲಕ್ಷ ಕೋಟಿ ರೂ ಇದೆ. ಒಟ್ಟು ನಿವ್ವಳ ಜಿಎಸ್‌ಟಿ, 3.54 ಲಕ್ಷ ಕೋಟಿ ರೂ ಇದೆ. ಇವುಗಳಲ್ಲಿ ಕ್ರಮವಾಗಿ ಶೇ. 7.1 ಮತ್ತು 7.2ರಷ್ಟು ಏರಿಕೆ ಆಗಿದೆ.
ಇದಕ್ಕೂ ಮುನ್ನ, ಕಳೆದ ಏಪ್ರಿಲ್ (2026) ತಿಂಗಳಿನಲ್ಲಿ ಭಾರತದ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮಟ್ಟದ 2.10 ಲಕ್ಷ ಕೋಟಿ ರೂ ಜಿಎಸ್‌ಟಿ ಸಂಗ್ರಹವಾಗಿ ದೇಶದ ಆರ್ಥಿಕ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
ಮೇ 2026 ರಲ್ಲಿ ಸಂಗ್ರಹವಾದ ಒಟ್ಟು ₹1,94,149 ಕೋಟಿ ಜಿಎಸ್‌ಟಿ ಆದಾಯದ ವಿವಿಧ ವಿಭಾಗಗಳು ಹೀಗಿವೆ:
- CGST (ಕೇಂದ್ರ ಜಿಎಸ್‌ಟಿ): ₹34,713 ಕೋಟಿ
- SGST (ರಾಜ್ಯ ಜಿಎಸ್‌ಟಿ): ₹43,001 ಕೋಟಿ
- IGST (ಸಮಗ್ರ ಜಿಎಸ್‌ಟಿ): ₹1,00,001 ಕೋಟಿ (ಇದರಲ್ಲಿ ಆಮದು ಸರಕುಗಳಿಂದ ಬಂದ ₹45,431 ಕೋಟಿ ಸೇರಿದೆ).
- Cess (ಸೆಸ್): ₹11,434 ಕೋಟಿ (ಇದರಲ್ಲಿ ಆಮದು ಸರಕುಗಳ ಮೇಲಿನ ₹932 ಕೋಟಿ ಸೆಸ್ ಸೇರಿದೆ).
ಮೇ ತಿಂಗಳ ಈ ಭಾರಿ ಜಿಎಸ್‌ಟಿ ತೆರಿಗೆ ಸಂಗ್ರಹವು ದೇಶದಲ್ಲಿ ವ್ಯಾಪಾರ-ವಹಿವಾಟುಗಳು ಸುಗಮವಾಗಿ ಸಾಗುತ್ತಿರುವುದನ್ನು ಮತ್ತು ತೆರಿಗೆ ಪಾವತಿಯ ನಿಯಮಗಳು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಯಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.

