ರಾಜ್‌ಕೋಟ್ (ಗುಜರಾತ್) : ಊಟ ಮಾಡಿದ ಬಳಿಕ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ 14 ವರ್ಷದ ಬಾಲಕಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ದುರ್ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಹೃದಯ ಸ್ತಂಭನದ ಅಪಾಯದ ಕುರಿತು ವೈದ್ಯರು ಮಹತ್ವದ ಎಚ್ಚರಿಕೆ ನೀಡಿದ್ದಾರೆ.
ಮೃತ ಬಾಲಕಿಯನ್ನು ಜಾಮ್‌ನಗರ ಮೂಲದ ಆನಂದಿ ರಾಜೇಶ್‌ಭಾಯ್ ಮೋದಿ (14) ಎಂದು ಗುರುತಿಸಲಾಗಿದೆ. ಕುಟುಂಬದವರೊಂದಿಗೆ ರೆಸಾರ್ಟ್‌ಗೆ ತೆರಳಿದ್ದ ಆಕೆ, ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟ ಮಾಡಿದ ಬಳಿಕ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಹಠಾತ್ ನೆಲಕ್ಕೆ ಕುಸಿದು ಬಿದ್ದಿದ್ದಾಳೆ.
ಘಟನೆಯಿಂದ ಬೆಚ್ಚಿಬಿದ್ದ ಕುಟುಂಬಸ್ಥರು ಮತ್ತು ರೆಸಾರ್ಟ್ ಸಿಬ್ಬಂದಿ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೃದಯ ಸ್ತಂಭನ (Cardiac Arrest) ಸಾವಿಗೆ ಕಾರಣವಾಗಿದೆ.
ಈ ಘಟನೆ ಸ್ಥಳದಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಟವಾಡುತ್ತಿದ್ದ ಬಾಲಕಿ ಕ್ಷಣಾರ್ಧದಲ್ಲಿ ಕುಸಿದು ಬೀಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಹಿನ್ನೆಲೆಯಲ್ಲಿ ವೈದ್ಯರು ಮಹತ್ವದ ಸಲಹೆ ನೀಡಿದ್ದಾರೆ. ನವದೆಹಲಿಯ AIIMS ಹೃದ್ರೋಗ ವಿಭಾಗದ ತಜ್ಞರ ಪ್ರಕಾರ, ಊಟ ಮಾಡಿದ ತಕ್ಷಣ ತೀವ್ರ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಕೆಲ ಸಂದರ್ಭಗಳಲ್ಲಿ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ಜೀರ್ಣಕ್ರಿಯೆಗಾಗಿ ದೇಹದ ರಕ್ತಸಂಚಾರ ಹೊಟ್ಟೆ ಭಾಗದತ್ತ ಕೇಂದ್ರೀಕೃತವಾಗಿರುವ ಸಮಯದಲ್ಲಿ ಓಡಾಟ, ನೃತ್ಯ ಅಥವಾ ಕಠಿಣ ವ್ಯಾಯಾಮ ಮಾಡುವುದರಿಂದ ಹೃದಯಕ್ಕೆ ಹೆಚ್ಚುವರಿ ಕೆಲಸದ ಒತ್ತಡ ಉಂಟಾಗುತ್ತದೆ.
ವಿಶೇಷವಾಗಿ ಹೃದಯ ಸಂಬಂಧಿತ ಅಡಗಿದ ಆರೋಗ್ಯ ಸಮಸ್ಯೆಗಳಿರುವವರಲ್ಲಿ ಇಂತಹ ಸಂದರ್ಭಗಳು ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಈ ದುರ್ಘಟನೆ ಬಳಿಕ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹಾಗೂ ಊಟದ ತಕ್ಷಣವೇ ತೀವ್ರ ದೈಹಿಕ ಚಟುವಟಿಕೆಗಳನ್ನು ತಪ್ಪಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

