ಪೌಷ್ಟಿಕಾಹಾರವೇ ಅಥವಾ ಅಪಾಯದ ಆಹಾರವೇ? ಗರ್ಭಿಣಿಗೆ ನೀಡಿದ ಲಡ್ಡು ಪ್ಯಾಕೆಟ್‌ನಲ್ಲಿ ಹಾವಿನ ಮರಿ!

0
114

ಮಧ್ಯಪ್ರದೇಶ : ಗರ್ಭಿಣಿ ಮಹಿಳೆಯರಿಗೆ ವಿತರಿಸಲಾಗುವ ಪೌಷ್ಟಿಕಾಹಾರದ ಗುಣಮಟ್ಟದ ಬಗ್ಗೆ ಆತಂಕ ಮೂಡಿಸುವ ಘಟನೆ ಮಧ್ಯಪ್ರದೇಶದ ಪಾಂಡುರ್ಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಂಗನವಾಡಿ ಕೇಂದ್ರದ ಮೂಲಕ ವಿತರಿಸಲಾದ ಪೌಷ್ಟಿಕಾಹಾರದ ಲಡ್ಡು ಪ್ಯಾಕೆಟ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯ ಕರ್ಘಾತ್ ಕಮ್ತಿ ಗ್ರಾಮದ ನಿವಾಸಿ ವತ್ಸಲಾ ಬಾಯಿ ಧುರ್ವೆ ಎಂಬ ಗರ್ಭಿಣಿ ಮಹಿಳೆಗೆ ಅಂಗನವಾಡಿಯ ಪೂರಕ ಪೌಷ್ಟಿಕಾಂಶ ಯೋಜನೆಯಡಿ ಲಡ್ಡುಗಳ ಪ್ಯಾಕೆಟ್ ನೀಡಲಾಗಿತ್ತು. ಆದರೆ ಅದೃಷ್ಟವಶಾತ್ ಆಹಾರವನ್ನು ಸೇವಿಸುವ ಮುನ್ನವೇ ಕುಟುಂಬಸ್ಥರು ಪ್ಯಾಕೆಟ್ ತೆರೆದಾಗ ಅದರೊಳಗೆ ಸತ್ತ ಹಾವಿನ ಮರಿ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ತಕ್ಷಣವೇ ಅವರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ದೂರು ಸ್ವೀಕರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಐವರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಪೌಷ್ಟಿಕಾಹಾರದ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಭೋಪಾಲ್‌ನ ರಾಜ್ಯ ಆಹಾರ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ಲ್ಯಾಬ್ ವರದಿ ಮತ್ತು ವಿಚಾರಣಾ ಸಮಿತಿಯ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಅಂಗನವಾಡಿ ಕೇಂದ್ರಗಳ ಮೂಲಕ ವಿತರಿಸಲಾಗುವ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದೇ ವೇಳೆ, ಅಧಿಕೃತ ತನಿಖಾ ವರದಿ ಬರುವವರೆಗೆ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

LEAVE A REPLY

Please enter your comment!
Please enter your name here