ಕೆಂಪೇಗೌಡ ಜಯಂತಿಯಂದು ಪರಿಸರ ಹಬ್ಬ ; ಗಿನ್ನಿಸ್ ದಾಖಲೆ ಬರೆಯಲು ಬಿಡಿಎ ಸಜ್ಜು..!

0
26

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರನ್ನು ಮತ್ತಷ್ಟು ಹಸಿರುಮಯಗೊಳಿಸುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದೆ. ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಜೂನ್ 27ರಂದು ನಗರದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಈ ಹಸಿರು ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಮಾತ್ರವೇ 5 ಲಕ್ಷ ಸಸಿಗಳನ್ನು ನೆಡಲು ಯೋಜಿಸಲಾಗಿದ್ದು, ಉಳಿದ 10 ಲಕ್ಷ ಸಸಿಗಳನ್ನು ಬನಶಂಕರಿ 6ನೇ ಹಂತ ಸೇರಿದಂತೆ ವಿವಿಧ ಬಡಾವಣೆಗಳು ಹಾಗೂ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ನೆಡಲಾಗುತ್ತದೆ.

ಸ್ಥಳೀಯ ಹಾಗೂ ಔಷಧೀಯ ಸಸ್ಯಗಳಿಗೆ ಆದ್ಯತೆ

ಈ ಕಾರ್ಯಕ್ರಮದಲ್ಲಿ ಕೇವಲ ಅಲಂಕಾರಿಕ ಗಿಡಗಳಿಗೆ ಮಾತ್ರವಲ್ಲದೆ ಪರಿಸರಕ್ಕೆ ಪೂರಕವಾಗಿರುವ ಮಾವು, ಹಲಸು, ಬೇವು, ಸಪೋಟ ಸೇರಿದಂತೆ 350ಕ್ಕೂ ಹೆಚ್ಚು ತಳಿಯ ಸ್ಥಳೀಯ ಹಾಗೂ ಔಷಧೀಯ ಸಸ್ಯಗಳಿಗೆ ಆದ್ಯತೆ ನೀಡಲಾಗಿದೆ.

ಜೀವವೈವಿಧ್ಯತೆ ಹೆಚ್ಚಿಸುವ ಉದ್ದೇಶದಿಂದ ‘ಒಂದು ಮನೆ – ಒಂದು ಔಷಧೀಯ ಸಸ್ಯ’ ಎಂಬ ವಿಶೇಷ ಪರಿಕಲ್ಪನೆಯನ್ನೂ ಅಭಿಯಾನದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆ

ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ N. A. Harris ಮಾತನಾಡಿ, “ಕೆಂಪೇಗೌಡ ಜಯಂತಿಯಂದು ನಡೆಯಲಿರುವ ಈ ಬೃಹತ್ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕು. ಅಧಿಕಾರಿಗಳು ಈಗಾಗಲೇ ಸಸಿಗಳ ಸಂಗ್ರಹಣೆ ಮತ್ತು ಸ್ಥಳ ಪರಿಶೀಲನೆ ಕಾರ್ಯ ಆರಂಭಿಸಿದ್ದಾರೆ. ಈ ಅಭಿಯಾನ ಗಿನ್ನಿಸ್ ದಾಖಲೆ ಬರೆಯಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.

ನಗರದ ಹಸಿರು ಸಂಪತ್ತನ್ನು ಹೆಚ್ಚಿಸುವ ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮಹಾ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

LEAVE A REPLY

Please enter your comment!
Please enter your name here