ಮಂಗಳೂರು : ಶಿಕ್ಷಣಕ್ಕೆ ಉತ್ತೇಜನ ನೀಡುವುದರೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ವಿನೂತನ ಪ್ರಯತ್ನವಾಗಿ ರಾಮಕೃಷ್ಣ ಮಿಷನ್, ಮಂಗಳೂರು ತನ್ನ ಅಮೃತ ವರ್ಷ (75ನೇ ವರ್ಷದ) ಆಚರಣೆಯ ಅಂಗವಾಗಿ ಮರುಬಳಕೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅತ್ತಾವರದಲ್ಲಿ ನಡೆದ ಕಾರ್ಯಕ್ರಮವನ್ನು ಸ್ವಾಮಿ ಜಿತಕಾಮಾನಂದಜಿ, ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಇಂದಿನ ಸಮಾಜದ ಪ್ರಮುಖ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಬಾಲ್ಯದಿಂದಲೇ ಮಿತವ್ಯಯ, ಮರುಬಳಕೆ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪರಿಸರದ ಬಗ್ಗೆ ಕಾಳಜಿ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ರೂಪುಗೊಳ್ಳಬಹುದು ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದ ಹಿನ್ನೆಲೆಯಾಗಿ ಸುಮಾರು ಮೂರು ತಿಂಗಳ ಹಿಂದೆ ರಾಮಕೃಷ್ಣ ಮಿಷನ್ ವತಿಯಿಂದ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಭಾಗಶಃ ಬಳಸಲ್ಪಟ್ಟ ಹಳೆಯ ನೋಟ್‌ಬುಕ್‌ಗಳನ್ನು ಸಂಗ್ರಹಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಸಂಗ್ರಹಿಸಲಾದ ನೋಟ್‌ಬುಕ್‌ಗಳಲ್ಲಿನ ಬಳಕೆಯಾಗದೆ ಉಳಿದಿದ್ದ ಹಾಳೆಗಳನ್ನು ಪ್ರತ್ಯೇಕಿಸಿ, ರಾಮಕೃಷ್ಣ ಮಿಷನ್ ಸ್ವಯಂಸೇವಕರು ಅವುಗಳನ್ನು ಮರುಸಂಸ್ಕರಿಸಿ ಹೊಸ ನೋಟ್‌ಬುಕ್‌ಗಳ ರೂಪದಲ್ಲಿ ಸಿದ್ಧಪಡಿಸಿದರು. ಪರಿಸರ ಸಂರಕ್ಷಣೆ ಹಾಗೂ ಸಂಪನ್ಮೂಲಗಳ ಸದ್ಬಳಕೆಯ ಉದ್ದೇಶದಿಂದ ಕೈಗೊಂಡ ಈ ವಿನೂತನ ಉಪಕ್ರಮದಡಿ ಸುಮಾರು 750 ಮರುಬಳಕೆ ನೋಟ್‌ಬುಕ್‌ಗಳನ್ನು ತಯಾರಿಸಲಾಯಿತು.
ಜೂನ್ 8 ಮತ್ತು 9ರಂದು ನಡೆದ ಈ ಕಾರ್ಯಕ್ರಮದಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ತಾವರ, ಪಾಂಡೇಶ್ವರ, ಹೊಯಿಗೆಬಜಾರ್, ಮಣ್ಣಗುಡ್ಡ, ಕುಂಪಲ, ಬೋಳಾರ, ಮಹಾಕಾಳಿಪಡ್ಡು ಹಾಗೂ ಸೂಟರಪೇಟೆ, ಭಗಿನಿ ಸಮಾಜ, ಸೇಂಟ್ ರೀಟಾ ಪ್ರಾಥಮಿಕ ಶಾಲೆ ಮತ್ತು ರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ಮರುಬಳಕೆ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಿಂದ ಸುಮಾರು 730 ವಿದ್ಯಾರ್ಥಿಗಳು ಪ್ರಯೋಜನ ಪಡೆದರು.

ಕಳೆದ 75 ವರ್ಷಗಳಿಂದ ಶಿಕ್ಷಣ, ಮೌಲ್ಯ ಶಿಕ್ಷಣ, ಆರೋಗ್ಯ ಸೇವೆ, ಯುವಜನಾಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಸಮಾಜಸೇವೆಯ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ರಾಮಕೃಷ್ಣ ಮಿಷನ್, ಮಂಗಳೂರು ತನ್ನ ಅಮೃತ ವರ್ಷಾಚರಣೆಯ ಅಂಗವಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮರುಬಳಕೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮವು ಅವುಗಳಲ್ಲಿ ವಿಶೇಷ ಮಹತ್ವ ಪಡೆದಿದೆ.
“ಬಳಸಿದ ಪುಟಗಳಿಂದ ಹೊಸ ಭವಿಷ್ಯದತ್ತ” ಎಂಬ ಸಂದೇಶವನ್ನು ಸಾರುವ ಈ ಯೋಜನೆಯು ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗೆ ನೆರವಾಗುವುದರ ಜೊತೆಗೆ ಪರಿಸರ ಜಾಗೃತಿ, ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಯ ಸಮ್ಮಿಲನವಾಗಿರುವ ಈ ಉಪಕ್ರಮವು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಸುಸ್ಥಿರ ಸಮಾಜ ನಿರ್ಮಾಣದತ್ತ ಒಂದು ಅರ್ಥಪೂರ್ಣ ಹೆಜ್ಜೆಯಾಗಿ ಗುರುತಿಸಿಕೊಂಡಿದೆ.

