ಮೂಡುಬಿದಿರೆಯಲ್ಲಿ ವಿಶ್ವ ಯೋಗ ದಿನಾಚರಣೆ : ಎರಡು ದಿನಗಳ ಯೋಗ ಶಿಬಿರ ಯಶಸ್ವಿ

0
17

ಮೂಡುಬಿದಿರೆ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಯೋಗ ಶಿಬಿರವು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು.

ಜೂನ್ 20ರಂದು ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಒಂದು ಗಂಟೆಯ ಕಾಲ ನಡೆದ ಯೋಗ ಶಿಬಿರದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಯೋಗಾಭ್ಯಾಸವನ್ನು ನಡೆಸಿಕೊಟ್ಟರು.

ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಯಾತ್ರಾರ್ಥಿಗಳು ಶ್ರೀಗಳೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಈ ವೇಳೆ ಮಹಾಸ್ವಾಮೀಜಿಗಳು ಯೋಗದ ಮಹತ್ವವನ್ನು ವಿವರಿಸಿ ವಿವಿಧ ಆಸನಗಳ ಬಗ್ಗೆ ಮಾಹಿತಿ ನೀಡಿದರು.

ಪದ್ಮಾಸನ, ಪರ್ವತಾಸನ, ಅನುಲೋಮ-ವಿಲೋಮ ಸೇರಿದಂತೆ ಮಯೂರಾಸನ, ಗೋರಕ್ಷಾಸನ, ಗರುಡಾಸನ, ಬ್ರಹ್ಮಚರ್ಯ ಆಸನ, ಶೀರ್ಷಾಸನ ಹಾಗೂ ಸರ್ವಾಂಗಾಸನದಂತಹ ಉನ್ನತ ಮಟ್ಟದ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ನೀಡಿ ಯಾತ್ರಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಯೋಗದ ಮೂಲಕ ದೇಹ ಮತ್ತು ಮನಸ್ಸಿನ ಹೊಂದಾಣಿಕೆ ಸಾಧಿಸಿ ಶಾಂತಿ ಹಾಗೂ ಉತ್ತಮ ಆರೋಗ್ಯವನ್ನು ಪಡೆಯಬಹುದು. ಯೋಗದಲ್ಲಿ ಲೋಕಕಲ್ಯಾಣದ ಭಾವನೆ ಅಡಗಿದ್ದು, ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ 10 ನಿಮಿಷಗಳಾದರೂ ಯೋಗಾಭ್ಯಾಸ ಮಾಡಬೇಕು ಎಂದು ಮಹಾಸ್ವಾಮೀಜಿಗಳು ಕರೆ ನೀಡಿದರು.

LEAVE A REPLY

Please enter your comment!
Please enter your name here