
ಮೂಡುಬಿದಿರೆ : ಅಭಿವೃದ್ಧಿ ಕಾಮಗಾರಿಗಳಿಗೆ ಹೆಸರಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ತಮ್ಮ ತವರು ಪ್ರದೇಶದ ಹೊಸಂಗಡಿ–ಆಲಗುಂಡಿ ಸಂಪರ್ಕ ರಸ್ತೆ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಹೊಂಡಮಯವಾಗಿದ್ದು, 50ಕ್ಕೂ ಹೆಚ್ಚು ಕುಟುಂಬಗಳು ಪ್ರತಿದಿನ ಸಂಕಷ್ಟದ ನಡುವೆ ಸಂಚರಿಸುವಂತಾಗಿದೆ.
ಒಂದು ಕಾಲದಲ್ಲಿ ಜನರ ಸಹಕಾರ, ಸ್ವಂತ ಹಣ ಮತ್ತು ವಿವಿಧ ಅನುದಾನಗಳ ಮೂಲಕ ಅಭಿವೃದ್ಧಿಪಡಿಸಿದ್ದ ಈ ರಸ್ತೆ, ಇದೀಗ ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ಹದಗೆಟ್ಟಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗಲಿಲ್ಲ ಎಂದು ಆರೋಪಿಸಿರುವ ಕೆ.ಪಿ. ಸುಚರಿತ ಶೆಟ್ಟಿ, ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣದಿಂದ ಅಭಿವೃದ್ಧಿ ಕಾಮಗಾರಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಾಧ್ಯತೆಯನ್ನು ಪ್ರಶ್ನಿಸಿದ್ದಾರೆ.

ರಸ್ತೆ ದುರಸ್ತಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಸುಚರಿತ ಶೆಟ್ಟಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರ ಮೂಲಭೂತ ಸೌಲಭ್ಯಗಳ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರ ಇರಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಅಭಿವೃದ್ಧಿಯ ನೆನಪು, ಇಂದಿನ ದುಸ್ಥಿತಿ
1993ರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ವೇಳೆ ಗ್ರಾಮಸ್ಥರು ಜಾಗ ಬಿಟ್ಟುಕೊಟ್ಟ ಪರಿಣಾಮ ರಸ್ತೆ ನಿರ್ಮಾಣ ಸಾಧ್ಯವಾಗಿತ್ತು. ತಮ್ಮ ವೈಯಕ್ತಿಕ ಹಣ ಮತ್ತು ಗದ್ದೆಯ ಮಣ್ಣನ್ನೂ ಬಳಸಿಕೊಂಡು ರಸ್ತೆ ನಿರ್ಮಾಣಕ್ಕೆ ಕೈಜೋಡಿಸಿದ್ದಾಗಿ ಅವರು ಸ್ಮರಿಸಿದ್ದಾರೆ. ಬಳಿಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ವೇಳೆ ₹4–5 ಲಕ್ಷ ಅನುದಾನದಲ್ಲಿ ಗುಣಮಟ್ಟದ ಡಾಂಬರೀಕರಣ ನಡೆದಿತ್ತು. ಆದರೆ ಕಳೆದ ಏಳು–ಎಂಟು ವರ್ಷಗಳಿಂದ ರಸ್ತೆ ಮತ್ತೆ ದುರಸ್ತಿ ಕಾಣದೆ ಹೊಂಡಮಯವಾಗಿದೆ.

ಮಳೆಗಾಲದಲ್ಲಿ ಜೀವದ ಹಂಗಿನ ಸಂಚಾರ
ಸುಮಾರು ಒಂದೂವರೆ ಕಿ.ಮೀ. ಉದ್ದದ ಈ ರಸ್ತೆಯನ್ನು ಪರಾರಿ ಎಸ್‌ಸಿ ಕಾಲೋನಿ, ಪಾಪೇಡಿ, ಕುಮೇರ್ ಸೇರಿದಂತೆ 50ಕ್ಕೂ ಹೆಚ್ಚು ಕುಟುಂಬಗಳು ಬಳಸುತ್ತಿವೆ. ಮಳೆ ಬಂದಾಗ ಹೊಂಡಗಳಲ್ಲಿ ನೀರು ತುಂಬಿ ರಸ್ತೆ ಕಾಣದಂತಾಗುತ್ತದೆ. ಶಾಲಾ ಮಕ್ಕಳು, ಮಹಿಳೆಯರು, ರೈತರು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳು ಪ್ರತಿದಿನ ಅಪಾಯದ ನಡುವೆ ಸಂಚರಿಸಬೇಕಾಗಿದೆ.
ಸ್ಥಳೀಯರ ಆಗ್ರಹ
ತಾತ್ಕಾಲಿಕ ದುರಸ್ತಿಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಂಪೂರ್ಣ ಮರುಡಾಂಬರೀಕರಣ ನಡೆಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಅಪಘಾತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮೊದಲು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ವಿಶೇಷ ವರದಿ : ಜಗದೀಶ್ ಪೂಜಾರಿ ಕಡಂದಲೆ
