ಮೂಡುಬಿದಿರೆ: ಕಡಂದಲೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 2026ನೇ ಸಾಲಿನ 46ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಪೂರ್ವಭಾವಿ ಸಭೆಯು ಭಾನುವಾರ ಕಡಂದಲೆ ಗಣೇಶ್ ದರ್ಶನ ಸಭಾಭವನದಲ್ಲಿ ಸಮಿತಿಯ ಅಧ್ಯಕ್ಷ ಕೆ. ಸುದರ್ಶನ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಈ ಬಾರಿಯ ಗಣೇಶೋತ್ಸವದ ಧಾರ್ಮಿಕ ಆಚರಣೆಗಳು, ವೈಭವದ ಮೆರವಣಿಗೆ, ಗಣೇಶೋತ್ಸವ ಅಂಗವಾಗಿ ಆಯೋಜಿಸಲಾಗುವ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ವಚ್ಛತಾ ಕಾರ್ಯಗಳ ಕುರಿತು ಸಮಗ್ರವಾಗಿ ವಿಚಾರ ವಿನಿಮಯ ನಡೆಯಿತು. ಉತ್ಸವವನ್ನು ಶಿಸ್ತುಬದ್ಧವಾಗಿ ಮತ್ತು ಜನಸಹಭಾಗಿತ್ವದೊಂದಿಗೆ ನಡೆಸಲು ಅಗತ್ಯ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ ಊರ ಭಗವತ್ ಬಂಧುಗಳು ಉತ್ಸವದ ಆಯೋಜನೆಗೆ ಸಂಬಂಧಿಸಿದಂತೆ ಅಮೂಲ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು. ಸಮಿತಿಯ ಉಪಾಧ್ಯಕ್ಷ ಕೆ.ಪಿ. ಸುಚೇರಿತ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಆಚರಣೆ ಸಮಿತಿಯ ನೂತನ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಭಟ್ ಬಡಗಬೆಟ್ಟು ಹಾಗೂ ಕೋಶಾಧಿಕಾರಿಯಾಗಿ ಹರೀಶ್ ಕರ್ಕೇರ ಅವರನ್ನು ಆಯ್ಕೆ ಮಾಡಲಾಯಿತು. ಉತ್ಸವದ ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕಾಗಿ ಹಿಂದಿನ ತಂಡವನ್ನೇ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸುರೇಂದ್ರ ಭಟ್ ಸಭೆಯನ್ನು ಸ್ವಾಗತಿಸಿ ವಂದಿಸಿದರು. ಕೆ. ನಾರಾಯಣ್ ಮಡಿವಾಳ್ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಮಾರ್ಗದರ್ಶನ ನೀಡಿದರು.

