ಮುಂಬೈನಿಂದ ಸ್ಯಾಂಡಲ್‌ವುಡ್‌ಗೆ ಐಶ್ವರ್ಯಾ ಶೆಟ್ಟಿ; ‘ತದ್ವಿರುದ್ಧ’ ಮೂಲಕ ನಾಯಕಿಯಾಗಿ ಪದಾರ್ಪಣೆ

0
31

ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆಯಾಗಿ ಗುರುತಿಸಿಕೊಳ್ಳುತ್ತಿರುವ ನಟಿ ಐಶ್ವರ್ಯಾ ಬಾಲಕೃಷ್ಣ ಶೆಟ್ಟಿ ಅವರು ‘ತದ್ವಿರುದ್ಧ’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಜುಲೈ 31ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಅವರು ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ಸಮೀಪದ ಆರೂರು ಗ್ರಾಮದ ಬಾಲಕೃಷ್ಣ ಶೆಟ್ಟಿ ಹಾಗೂ ಹೇಮಲತಾ ಬಾಲಕೃಷ್ಣ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಐಶ್ವರ್ಯಾ, ಮುಂಬೈನಲ್ಲಿ ಹುಟ್ಟಿ ಬೆಳೆದವರು. ಮುಂಬೈನ ಸೈಂಟ್ ಇಗ್ನೇಷಿಯಸ್ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಹಾಗೂ ವಿಲ್ಸನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ಬಾಲ್ಯದಿಂದಲೇ ಯಕ್ಷಗಾನ, ತಾಳಮದ್ದಳೆ ಹಾಗೂ ಕರಾವಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೆಳೆದಿರುವ ಐಶ್ವರ್ಯಾ ಅವರಿಗೆ ಅಭಿನಯದ ಮೇಲೆ ವಿಶೇಷ ಆಸಕ್ತಿ ಮೂಡಿತ್ತು. ಬಳಿಕ ಅನುಪಮ್ ಖೇರ್ ಅಭಿನಯ ಸಂಸ್ಥೆಯಲ್ಲಿ ನಟನಾ ತರಬೇತಿ ಹಾಗೂ ಶಿಯಾಮಕ್ ದಾವರ್ ನೃತ್ಯ ಸಂಸ್ಥೆಯಲ್ಲಿ ವೃತ್ತಿಪರ ನೃತ್ಯ ತರಬೇತಿ ಪಡೆದು ತಮ್ಮ ಪ್ರತಿಭೆಯನ್ನು ಮತ್ತಷ್ಟು ವೃದ್ಧಿಸಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಪ್ರತಿಭೆ ಪ್ರದರ್ಶಿಸಿರುವ ಅವರು, ಫಿಲಿಪೈನ್ಸ್‌ನಲ್ಲಿ ನಡೆದ ‘ಮಿಸ್ ವರ್ಲ್ಡ್ ಟೂರಿಸಂ’ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ‘ಬೆಸ್ಟ್ ಇನ್ ಟ್ಯಾಲೆಂಟ್’ ಪ್ರಶಸ್ತಿ ಪಡೆದಿರುವುದರ ಜೊತೆಗೆ ಟಾಪ್-10 ಫೈನಲಿಸ್ಟ್ಗಳ ಪೈಕಿ ಸ್ಥಾನ ಪಡೆದಿದ್ದಾರೆ.

ಐಶ್ವರ್ಯಾ ಅವರ ಸಿನಿ ಪಯಣಕ್ಕೆ ತಂದೆ ಬಾಲಕೃಷ್ಣ ಶೆಟ್ಟಿ, ತಾಯಿ ಹೇಮಲತಾ ಶೆಟ್ಟಿ ಹಾಗೂ ಕುಟುಂಬದ ಸದಸ್ಯರು ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿದ್ದು, ಅವರ ಸಾಧನೆಯ ಹಿಂದೆ ಕುಟುಂಬದ ಪಾತ್ರ ಮಹತ್ವದ್ದಾಗಿದೆ.

ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡಿರುವ ಐಶ್ವರ್ಯಾ, “ಜೀವನದಲ್ಲಿ ಎದುರಾಗುವ ವೈಫಲ್ಯಗಳು ಮತ್ತು ಸವಾಲುಗಳೇ ನಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿಸುತ್ತವೆ. ಎಲ್ಲವನ್ನೂ ಮೊದಲೇ ತಿಳಿದಿರಬೇಕೆಂದಿಲ್ಲ, ಸರಿಯಾದ ಮುಂದಿನ ಹೆಜ್ಜೆ ಇಟ್ಟರೆ ಸಾಕು” ಎಂಬ ಸಂದೇಶವನ್ನು ಯುವಜನತೆಗೆ ನೀಡಿದ್ದಾರೆ.

ಕರಾವಳಿಯ ಪ್ರತಿಭೆಯಾಗಿರುವ ಐಶ್ವರ್ಯಾ ಶೆಟ್ಟಿ ಅಭಿನಯದ ‘ತದ್ವಿರುದ್ಧ’ ಚಿತ್ರವು ಯಶಸ್ಸು ಸಾಧಿಸಿ, ಕನ್ನಡ ಚಿತ್ರರಂಗದಲ್ಲಿ ಅವರು ಉನ್ನತ ಸ್ಥಾನಕ್ಕೇರಲಿ ಎಂಬುದು ಸಿನಿಪ್ರಿಯರ ಹಾರೈಕೆಯಾಗಿದೆ.