ಆನ್‌ಲೈನ್ ಶಾಪಿಂಗ್ ಎಡವಟ್ಟು; ಐಫೋನ್ ಬದಲು ಬಿಯರ್ಡ್ ಆಯಿಲ್ ಡೆಲಿವರಿ

0
8

ಮುಂಬೈ : ಆನ್‌ಲೈನ್‌ನಲ್ಲಿ ₹1.11 ಲಕ್ಷ ಮೌಲ್ಯದ ಪ್ರೀಮಿಯಂ ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಫೋನ್ ಬದಲಿಗೆ ಗಡ್ಡದ ಬೆಳವಣಿಗೆಗೆ ಬಳಸುವ ಎಣ್ಣೆ ತಲುಪಿದ ಪ್ರಕರಣದಲ್ಲಿ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ಗೆ ಮುಂಬೈನ ಗ್ರಾಹಕ ನ್ಯಾಯಾಲಯ ಭಾರಿ ಹೊಡೆತ ನೀಡಿದೆ. ಗ್ರಾಹಕನಿಗೆ ಫೋನ್‌ನ ಪೂರ್ಣ ಮೊತ್ತವನ್ನು ಬಡ್ಡಿ ಸಮೇತ ಹಿಂದಿರುಗಿಸುವುದರ ಜೊತೆಗೆ ಮಾನಸಿಕ ಯಾತನೆ ಮತ್ತು ನ್ಯಾಯಾಂಗ ವೆಚ್ಚಕ್ಕಾಗಿ ಒಟ್ಟು ₹70,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

2023ರ ಏಪ್ರಿಲ್‌ನಲ್ಲಿ ಮುಂಬೈನ ಪೊವೈ ನಿವಾಸಿಯೊಬ್ಬರು ಫ್ಲಿಪ್‌ಕಾರ್ಟ್ ಮೂಲಕ ₹1,11,793 ಮೌಲ್ಯದ ಆ್ಯಪಲ್ ಐಫೋನ್ 14 ಪ್ರೊ (128GB) ಅನ್ನು ನೋ-ಕಾಸ್ಟ್ ಇಎಂಐ ಯೋಜನೆಯಡಿ ಬುಕ್ ಮಾಡಿದ್ದರು. ಫೋನ್‌ಗೆ ಆರ್ಡರ್ ಮಾಡಿದ್ದ ಚಾರ್ಜರ್ ಹಾಗೂ ಕವರ್ ಸರಿಯಾಗಿ ತಲುಪಿದ್ದರೂ, ಮುಖ್ಯ ಪಾರ್ಸೆಲ್ ತೆರೆದಾಗ ಐಫೋನ್ ಬದಲಿಗೆ ಗಡ್ಡದ ಎಣ್ಣೆಯ ಬಾಟಲಿ ಮತ್ತು ಪ್ಯಾಕಿಂಗ್ ಸಾಮಗ್ರಿಗಳು ಇರುವುದನ್ನು ಕಂಡು ಗ್ರಾಹಕ ಬೆಚ್ಚಿಬಿದ್ದಿದ್ದರು.

ತಕ್ಷಣವೇ ಫ್ಲಿಪ್‌ಕಾರ್ಟ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ಎಲ್ಲಾ ಸಾಕ್ಷ್ಯಗಳನ್ನು ಸಲ್ಲಿಸಿದರೂ, ಕಂಪನಿ ಹಣ ಮರುಪಾವತಿಸದೇ ಹಾಗೂ ಹೊಸ ಫೋನ್ ನೀಡದೇ, ದೂರನ್ನು ಪರಿಹರಿಸಲಾಗಿದೆ ಎಂದು ಮುಚ್ಚಿತ್ತು. ಬಳಿಕ ಗ್ರಾಹಕರು ಮುಂಬೈನ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಐಫೋನ್‌ನ ₹1,11,793 ಮೊತ್ತವನ್ನು ವಾರ್ಷಿಕ 9% ಬಡ್ಡಿಯೊಂದಿಗೆ ಮರುಪಾವತಿಸಬೇಕು ಎಂದು ಆದೇಶಿಸಿದೆ. ಜೊತೆಗೆ ಮಾನಸಿಕ ಕಿರುಕುಳಕ್ಕೆ ₹50,000 ಹಾಗೂ ವ್ಯಾಜ್ಯದ ವೆಚ್ಚಕ್ಕೆ ₹20,000 ಸೇರಿ ಒಟ್ಟು ₹70,000 ಪರಿಹಾರವನ್ನು 45 ದಿನಗಳೊಳಗೆ ಪಾವತಿಸಬೇಕು ಎಂದು ನಿರ್ದೇಶನ ನೀಡಿದೆ.

ಗ್ರಾಹಕರಿಗೆ ತಪ್ಪು ವಸ್ತು ತಲುಪಿದಾಗ ಇ-ಕಾಮರ್ಸ್ ಸಂಸ್ಥೆ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ತನಿಖೆ ನಡೆಸದೇ ದೂರನ್ನು ಮುಚ್ಚುವುದು “ಅನ್ಯಾಯದ ವ್ಯಾಪಾರ ಪದ್ಧತಿ” ಎಂದು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣದಲ್ಲಿ ಆ್ಯಪಲ್ ಇಂಡಿಯಾಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಪ್ಯಾಕಿಂಗ್ ಮತ್ತು ವಿತರಣೆಯ ಜವಾಬ್ದಾರಿ ಸಂಪೂರ್ಣವಾಗಿ ಫ್ಲಿಪ್‌ಕಾರ್ಟ್ ಮತ್ತು ಅದರ ಮಾರಾಟಗಾರ ಸಂಸ್ಥೆಯದ್ದೇ ಎಂದು ತೀರ್ಪಿನಲ್ಲಿ ತಿಳಿಸಿದೆ.