ಸಂತೆಬೆನ್ನೂರು ಫೈಜ್ನಟ್ರಾಜ್ ಅವರಿಗೆ 2026ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿ

0
6

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಪಟೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2026ನೇ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಅಂಗುಲಿಮಾಲನ ಎದುರು ಕೂತ ಬುದ್ಧ ನೀನಲ್ಲ’ ಎಂಬ ಹಸ್ತಪ್ರತಿ ಆಯ್ಕೆಯಾಗಿದೆ.

ಈ ಕುರಿತು ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರು ಪ್ರಕಟಣೆ ಮೂಲಕ ಘೋಷಿಸಿದ್ದಾರೆ. ಈ ಬಾರಿಯ ಪ್ರಶಸ್ತಿ ಸ್ಪರ್ಧೆಗೆ ಒಟ್ಟು 38 ಹಸ್ತಪ್ರತಿಗಳು ಸಲ್ಲಿಕೆಯಾಗಿದ್ದು, ಪ್ರಸಿದ್ಧ ವಿಮರ್ಶಕರಾದ ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್), ಡಾ. ರವಿಶಂಕರ್ ಜಿ.ಕೆ. ಹಾಗೂ ಟಿ.ಎ.ಎನ್. ಖಂಡಿಗೆ ಅವರು ನೀಡಿದ ಅಂಕಗಳ ಆಧಾರದ ಮೇಲೆ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ.

1979ರಲ್ಲಿ ನಂದಳಿಕೆಯ ವರಕವಿ ಮುದ್ದಣ ಅವರ ಹೆಸರಿನಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯು ₹10,000 ಗೌರವ ಸಂಭಾವನೆ, ತಾಮ್ರಪತ್ರ ಹಾಗೂ ಸನ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 2027ರ ಮಾರ್ಚ್ ತಿಂಗಳಲ್ಲಿ ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ