ಉಡುಪಿ: ಜಿಲ್ಲೆಯ ದಿವ್ಯಾಂಗರಿಗೆ ಸರ್ಕಾರಿ ಸೇವೆಗಳು ಮತ್ತಷ್ಟು ಸುಲಭವಾಗಿ ದೊರೆಯುವ ಉದ್ದೇಶದಿಂದ ‘ಯುಡಿಐಡಿ (UDID) ಕಾರ್ಡ್ ಸೇವಾ ಸಪ್ತಾಹ’ ಕಾರ್ಯಕ್ರಮವನ್ನು ಆಯೋಜಿಸಬೇಕು ಹಾಗೂ ಪ್ರತಿ ತಿಂಗಳು ದೊರೆಯಬೇಕಾದ ದಿವ್ಯಾಂಗರ ಮಾಸಿಕ ಭತ್ಯೆಯನ್ನು ಯಾವುದೇ ವಿಳಂಬವಿಲ್ಲದೆ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಮಾಸಿಕ ಭತ್ಯೆ ಬಿಡುಗಡೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ದಿವ್ಯಾಂಗರು ತಮ್ಮ ದಿನನಿತ್ಯದ ಜೀವನ ನಿರ್ವಹಣೆ ಹಾಗೂ ಅಗತ್ಯ ಔಷಧಿಗಳನ್ನು ಖರೀದಿಸಲು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತು ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೀಗಾಗಿ ಮಾನವೀಯ ನೆಲೆಯಲ್ಲಿ ತಕ್ಷಣವೇ ಬಾಕಿ ಇರುವ ಮಾಸಿಕ ಭತ್ಯೆಯನ್ನು ಬಿಡುಗಡೆ ಮಾಡಿ, ಮುಂದಿನ ದಿನಗಳಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಜಿಲ್ಲೆಯಾದ್ಯಂತ ಯುಡಿಐಡಿ ಕಾರ್ಡ್ ಸೇವಾ ಸಪ್ತಾಹ ಆಯೋಜಿಸಿ, ಹೆಚ್ಚಿನ ಸಂಖ್ಯೆಯ ದಿವ್ಯಾಂಗರಿಗೆ ಕಾರ್ಡ್ ವಿತರಣೆ ಹಾಗೂ ಸಂಬಂಧಿತ ಸೇವೆಗಳನ್ನು ಒದಗಿಸಬೇಕು ಎಂದು ಕೆ. ವಿಜಯ ಕೊಡವೂರು ಹಾಗೂ ಸಾರ್ವಜನಿಕರು ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

