ಕಾಪು : ಜೇಸಿಐ ವಲಯ 15ರ ಘಟಕವಾದ ಜೇಸಿಐ ಕಾಪು ಘಟಕದ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಅಂಗವಾಗಿ ಕಾಪು ಪೊಲೀಸ್ ಠಾಣೆಗೆ ಎರಡು ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು. ಜೇಸಿಐ ಕಾಪು ಘಟಕ ಹಾಗೂ ಗ್ರೀನ್‌ವುಡ್ ರೆಸಾರ್ಟ್ ಸಹಯೋಗದಲ್ಲಿ ಈ ಶಾಶ್ವತ ಯೋಜನೆ ಕೈಗೊಳ್ಳಲಾಗಿದ್ದು, ವಲಯಾಧ್ಯಕ್ಷ ಜೆಎಫ್‌ಎಸ್ ಸಂತೋಷ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಬ್ಯಾರಿಕೇಡ್‌ಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಪೊಲೀಸ್ ಠಾಣೆಯ ತನಿಖಾಧಿಕಾರಿ ಶುಭಕರ್ ಹಾಗೂ ಸಹಾಯಕ ಪೊಲೀಸ್ ಉಪನಿರೀಕ್ಷಕ ರವೀಶ್ ಹೊಳ್ಳ ಅವರು ಜೇಸಿಐ ಕಾಪು ಘಟಕದ ಸಮಾಜಮುಖಿ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.

ಬಳಿಕ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಜೇಸಿಐ ಕಾಪು ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಈ ಹಿಂದೆ ಕಾಪು ಘಟಕದ ಆತಿಥ್ಯದಲ್ಲಿ ನಡೆದ ಮಧ್ಯಂತರ ವಲಯ ಸಮ್ಮೇಳನದ ಯಶಸ್ಸನ್ನು ಸ್ಮರಿಸಿದ ಅವರು, ಮುಂದಿನ ದಿನಗಳಲ್ಲಿಯೂ ಘಟಕವು ಇನ್ನಷ್ಟು ಸಮಾಜಮುಖಿ ಹಾಗೂ ಜನಪರ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಂಗವಾಗಿ ತುಳುನಾಡಿನ ಸಾಂಪ್ರದಾಯಿಕ ‘ಆಟಿದ ತಮ್ಮನ’ ಆಚರಣೆಯನ್ನು ವಿಶೇಷವಾಗಿ ನೆರವೇರಿಸಲಾಯಿತು. ಅತಿಥಿಗಳನ್ನು ಸಾಂಪ್ರದಾಯಿಕ ಶಾಲು ಹೊದಿಸಿ, ವೀಳ್ಯದೆಲೆ–ಅಡಿಕೆ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕಲಸೆಗೆ ಕುರುವೆಯಲ್ಲಿ ಅಕ್ಕಿಯನ್ನು ತುಂಬಿಸಿ ಹಿಂಗಾರವನ್ನು ಇರಿಸುವ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ತುಳುವಪ್ಪೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ತುಳುನಾಡಗೀತೆಯ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು.
ಪೂರ್ವ ವಲಯ ಅಧ್ಯಕ್ಷ ರಾಕೇಶ್ ಕುಂಜೂರು ಅವರು ತುಳುವರ ಆಟಿ ತಿಂಗಳು ಹಾಗೂ ಅದರ ವೈಶಿಷ್ಟ್ಯಪೂರ್ಣ ಆಚರಣೆಗಳ ಕುರಿತು ಮಾಹಿತಿ ನೀಡಿದರು.
ಸಾಧಕರಿಗೆ ಸನ್ಮಾನ
ವಲಯಾಧ್ಯಕ್ಷರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಯಶಸ್ವಿ ನಾಯಕತ್ವಕ್ಕಾಗಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜೇಸಿಐ ವತಿಯಿಂದ ಆಯೋಜಿಸಲಾಗುವ ‘ಮೌನ ಸಾಧಕರ ಸಾಧನೆಯ ಸನ್ಮಾನ’ದ ಅಂಗವಾಗಿ ರಾಷ್ಟ್ರಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಗಾಯನ್ ಸಿ. ಸುವರ್ಣ ಹಾಗೂ ‘ಆಟಿದ ತಮ್ಮನ’ ಕಾರ್ಯಕ್ರಮದ ಅಂಗವಾಗಿ ತುಳು ಲಿಪಿ ಕಲಿಕೆಗೆ ವಿಶೇಷ ಕೊಡುಗೆ ನೀಡಿರುವ ಅಕ್ಷತಾ ಜ್ಞಾನೇಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಪ್ರಶ್ನೋತ್ತರ ಕಾರ್ಯಕ್ರಮವೂ ನಡೆಯಿತು. ಸರಿಯಾದ ಉತ್ತರ ನೀಡಿದವರಿಗೆ ಬಹುಮಾನ ವಿತರಿಸಲಾಯಿತು. ಜೇಸಿಐ ಕಾಪು ಘಟಕದ ಸದಸ್ಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿ ತಂದಿದ್ದ ವಿವಿಧ ಬಗೆಯ ಸಾಂಪ್ರದಾಯಿಕ ತುಳುನಾಡಿನ ಖಾದ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಜೆಎಫ್‌ಡಿ ಅರುಣ್ ಮಾಂಜ, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಜೆಎಫ್‌ಪಿ ಲೂಯಿಸ್ ಮಸ್ಕರೇನಸ್, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ಕಾರ್ಯದರ್ಶಿ ಶೃತಿ ಶೆಟ್ಟಿ, ಲೇಡಿ ಜೆಸಿ ಸಂಯೋಜಕಿ ಕವಿತಾ ಕುಂದರ್, ‘ಆಟಿದ ತಮ್ಮನ’ ನಿರ್ದೇಶಕಿ ಸುಖಲಾಕ್ಷಿ ಬಂಗೇರ, ಸಹ ನಿರ್ದೇಶಕಿ ಸತ್ಯವತಿ ಬಂಗೇರ, ಜೂನಿಯರ್ ಜೆಸಿ ಅಧ್ಯಕ್ಷ ಮನ್ವಿತ್ ಬಂಗೇರ ಸೇರಿದಂತೆ ಜೇಸಿಐ ಕಾಪು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

