ಹಿಂದೂ ಜನಜಾಗೃತಿ ಸಮಿತಿಯ ‘ರಾಷ್ಟ್ರಧ್ವಜವನ್ನು ಗೌರವಿಸಿ’ ಅಭಿಯಾನ !

0
13

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅವಮಾನವನ್ನು ತಡೆಯಲು ಹಾಗೂ ಪ್ಲಾಸ್ಟಿಕ್ ಧ್ವಜ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಗ್ರಹ

ಮಂಗಳೂರು: ರಾಷ್ಟ್ರಧ್ವಜವು ಪ್ರತಿಯೊಬ್ಬ ಭಾರತೀಯನ ಹೆಮ್ಮೆ, ಆತ್ಮ ಸಮ್ಮಾನ ಮತ್ತು ರಾಷ್ಟ್ರೀಯತೆಯ ಗುರುತಾಗಿದೆ. ಆಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆ ಮತ್ತು ಜನವರಿ 26ರ ಗಣರಾಜ್ಯೋತ್ಸವದಂದು ದೇಶಾದ್ಯಂತ ಅತ್ಯಂತ ಅಭಿಮಾನದಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗುತ್ತದೆ . ಆದರೆ ಅದೇ ದಿನ ಸಂಜೆ ಅಥವಾ ಮರುದಿನ ರಸ್ತೆಗಳಲ್ಲಿ, ಚರಂಡಿಗಳಲ್ಲಿ ಹಾಗೂ ಕಸದ ತೊಟ್ಟಿಗಳಲ್ಲಿ ಕಾಗದ ಮತ್ತು ಪ್ಲಾಸ್ಟಿಕ್‌ನ ಸಣ್ಣ ಸಣ್ಣ ಧ್ವಜಗಳು ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ.

ಈ ಧ್ವಜಗಳು ಜನರ ಕಾಲ್ಕೆಳಗೆ ತುಳಿಯಲ್ಪಟ್ಟು ರಾಷ್ಟ್ರಧ್ವಜಕ್ಕೆ ಘೋರ ಅನಾದರವಾಗುತ್ತಿದ್ದು, ಧ್ವಜದ ಗೌರವಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ದೇಶಭಕ್ತರು ಮತ್ತು ಕ್ರಾಂತಿಕಾರಿಗಳ ತ್ಯಾಗಕ್ಕೆ ಎಸಗುವ ಅಪಚಾರವಾಗಿದೆ. ಇದಲ್ಲದೆ, ‘ತ್ರಿವರ್ಣ ಮಾಸ್ಕ್’ಗಳನ್ನು ಧರಿಸುವುದು ಅಥವಾ ಮಾರಾಟ ಮಾಡುವುದು ಧ್ವಜ ಸಂಹಿತೆಯ ಪ್ರಕಾರ ಅಪರಾಧವಾಗಿದ್ದು, ‘ರಾಷ್ಟ್ರದ ಗೌರವದ ಅಪಮಾನ ನಿವಾರಣೆ ಅಧಿನಿಯಮ ೧೯೭೧’ರ ಸ್ಪಷ್ಟ ಉಲ್ಲಂಘನೆಯಾಗಿದೆ.

ರಾಷ್ಟ್ರಧ್ವಜಕ್ಕೆ ಆಗುವ ಈ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL 103/2011) ಸಲ್ಲಿಸಿದ್ದು, ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರಧ್ವಜಗಳಿಂದ ಆಗುವ ಅಪಮಾನವನ್ನು ತಡೆಯುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸಿದ್ದು, ಕೇಂದ್ರ ಸರ್ಕಾರವೂ ‘ಪ್ಲಾಸ್ಟಿಕ್ ನಿಷೇಧ’ಕ್ಕೆ ಕ್ರಮ ಕೈಗೊಂಡಿದೆ. ಅದರಂತೆ, ಪ್ಲಾಸ್ಟಿಕ್ ಧ್ವಜಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು ‘ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆ ೧೯೫೦’ ಹಾಗೂ ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ ೧೯೧’ರ ಅಡಿಯಲ್ಲಿ ಕಾನೂನುಬಾಹಿರ ಅಪರಾಧವಾಗಿದೆ. ಸಮಿತಿಯು ಕಳೆದ 16 ವರ್ಷಗಳಿಂದ ‘ರಾಷ್ಟ್ರಧ್ವಜವನ್ನು ಗೌರವಿಸಿ!’ ಎಂಬ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

ರಾಷ್ಟ್ರಧ್ವಜದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.

ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಹೈಕೋರ್ಟ್ ಆದೇಶದಂತೆ ಜಿಲ್ಲೆಯಲ್ಲಿ ‘ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿ’ಯನ್ನು ರಚಿಸಬೇಕು, ನಿಷೇಧಿತ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಶಾಲಾ-ಕಾಲೇಜುಗಳಲ್ಲಿ ಧ್ವಜ ಗೌರವ ಅಭಿಯಾನಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಸರ್ಕಾರದ ಸುಗ್ರೀವಾಜ್ಞೆ ಹಾಗೂ ಧ್ವಜ ಸಂಹಿತೆಯನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವ ಅಂಗಡಿಕಾರರು, ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ವಿನಂತಿಸಲಾಗಿದೆ.

ಹಾಗೆಯೇ ಕೆನರಾ ಹೈಸ್ಕೂಲ್ ಮತ್ತು ವಿದ್ಯಾ ಸಂಸ್ಥೆಗಳು, ಬಿ ಎಂ ಹಿರಿಯ ಪ್ರೈಮರಿ ಸ್ಕೂಲ್ ಕಾಸರಗೋಡು, ಶ್ರೀ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ ತೊಕ್ಕೊಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಡೂರು, ಶ್ರೀ ವಿವೇಕಾನಂದ ಸ್ಕೂಲ್ ವಿದ್ಯಾ ಸಂಸ್ಥೆ ಪೆರ್ಲಡ್ಕ, ಅಂಕುರ್ ಪ್ರೌಢಶಾಲೆ ಕುಳಾಯಿ, ಶ್ರೀ ರಾಮಕೃಷ್ಣ ಪಿ.ಯು ಕಾಲೇಜ್ ಶಿಕ್ಷಣಾಧಿಕಾರಿಗಳಿಗೆ ಹಾಗೂ ಅನೇಕ ಶಾಲಾ ಕಾಲೇಜಿನ ಮಾನ್ಯ ಮುಖ್ಯೋಪಾಧ್ಯಾಯರಿಗೆ ನೀಡಿದ ಮನವಿಯಲ್ಲಿ, ವಿದ್ಯಾರ್ಥಿಗಳು ಪ್ಲಾಸ್ಟಿಕ್/ಕಾಗದದ ಧ್ವಜಗಳನ್ನು ಮತ್ತು ‘ತ್ರಿವರ್ಣ ಮಾಸ್ಕ್’ಗಳನ್ನು ಖರೀದಿಸದಂತೆ ಜಾಗೃತಿ ಮೂಡಿಸಲು ಹಾಗೂ ಶಾಲಾ-ಕಾಲೇಜುಗಳಲ್ಲಿ ಸಮಿತಿಯ ವತಿಯಿಂದ ‘ರಾಷ್ಟ್ರಧ್ವಜವನ್ನು ಗೌರವಿಸಿ!’ ವಿಷಯದ ಕುರಿತು ಉಪನ್ಯಾಸ, ಪ್ರಶ್ನೋತ್ತರ ಸ್ಪರ್ಧೆ, ಕರಪತ್ರ ವಿತರಣೆ ಮತ್ತು ಬಿದ್ದಿರುವ ಧ್ವಜಗಳನ್ನು ಸಂಗ್ರಹಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡುವಂತೆ ಕೋರಲಾಗಿದೆ.

ರಾಷ್ಟ್ರಧ್ವಜದ ಗೌರವವನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು ಹಾಗೂ ಮಾಧ್ಯಮಗಳು ಈ ರಾಷ್ಟ್ರಾಭಿಮಾನಿ ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ಹಿಂದೂ ಜನಜಾಗೃತಿ ಸಮಿತಿ ವಿನಂತಿಸುತ್ತದೆ.