ಕಾಸರಗೋಡು : ಮನೆಯ ಟಿ.ವಿ. ಕೆಟ್ಟು ಹೋಗಿದ್ದರಿಂದ ಮನನೊಂದು 65 ವರ್ಷದ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಮಠ ಗುಡ್ಡೆಯಲ್ಲಿ ನಡೆದಿದೆ.
ಮೃತರನ್ನು ದಿವಂಗತ ಯೋಗೀಶ್ ಪ್ರಭು ಅವರ ಪತ್ನಿ ಸಾವಿತ್ರಿ ಪ್ರಭು (65) ಎಂದು ಗುರುತಿಸಲಾಗಿದೆ. ಅಡುಗೆ ಕೋಣೆಯಲ್ಲಿದ್ದ ಫೈಬರ್ ಕುರ್ಚಿಯ ಮೇಲೆ ಕುಳಿತುಕೊಂಡು ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬೆಂಕಿಯ ತೀವ್ರತೆಗೆ ಕುರ್ಚಿ ಸುಟ್ಟು ಮೃತದೇಹಕ್ಕೆ ಅಂಟಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಾವಿತ್ರಿ ಅವರು ಪ್ರತಿದಿನ ಬೆಳಗ್ಗೆ ಸುಮಾರು 6 ಗಂಟೆಗೆ ಎದ್ದು, ಎದ್ದ ತಕ್ಷಣ ಟಿ.ವಿ. ವೀಕ್ಷಿಸುವ ಅಭ್ಯಾಸ ಹೊಂದಿದ್ದರು ಎಂದು ಪುತ್ರ ಗುರುಪ್ರಸಾದ್ ತಿಳಿಸಿದ್ದಾರೆ. ಆದರೆ ಮಂಗಳವಾರ ಮನೆಯ ಟಿ.ವಿ. ಕೆಟ್ಟುಹೋಗಿದ್ದರಿಂದ ಅದನ್ನು ದುರಸ್ತಿಗಾಗಿ ಕೊಂಡೊಯ್ಯಲಾಗಿತ್ತು. ಬುಧವಾರ ದುರಸ್ತಿ ಮಾಡಿ ವಾಪಸ್ ನೀಡುವುದಾಗಿ ತಿಳಿಸಲಾಗಿತ್ತು ಎನ್ನಲಾಗಿದೆ.
ಮಂಗಳವಾರ ಮನೆಯಲ್ಲಿ ಟಿ.ವಿ. ಇಲ್ಲದಿರುವುದರಿಂದ ಸಾವಿತ್ರಿ ಅವರು ತೀವ್ರವಾಗಿ ಚಿಂತಿತರಾಗಿದ್ದರು. ಇದೇ ಕಾರಣದಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪುತ್ರ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
ಆ.18ರಂದು ರಾತ್ರಿ ಊಟ ಮಾಡಿದ ಬಳಿಕ ಸಾವಿತ್ರಿ ಅವರು ನಿದ್ರೆಗೆ ತೆರಳಿದ್ದರು. ಬುಧವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

