ತುಳುವ ಮಹಾಸಭೆ ಇಂಟರ್ನ್ಯಾಷನಲ್ : ಸೆ. 3ರಂದು ಮಂಗಳೂರು ವಲಯ ಸಮಿತಿ ರೂಪೀಕರಣ ಸಭೆ

0
11

ಮಂಗಳೂರು : 1928ರಲ್ಲಿ ಉಡುಪಿಯಲ್ಲಿ ಆರಂಭಗೊಂಡು ಐತಿಹಾಸಿಕ ಶತಮಾನೋತ್ಸವದತ್ತ ಹೆಜ್ಜೆ ಇಡುತ್ತಿರುವ ‘ತುಳುವ ಮಹಾಸಭೆ’ಯ ವಿಸ್ತರಣೆಯ ಭಾಗವಾಗಿ, ಮಂಗಳೂರು ವಲಯ ಸಮಿತಿ ರೂಪೀಕರಣದ ಮಹತ್ವದ ಸಭೆಯು ಮುಂಬರುವ ಸೆಪ್ಟೆಂಬರ್ 3ರಂದು ಮಂಗಳೂರಿನಲ್ಲಿ ಆಯೋಜನೆಗೊಂಡಿದೆ.

​​ಎಸ್.ಯು. ಪಣಿಯಾಡಿ ಅವರ ಕಾರ್ಯದರ್ಶಿತ್ವ ಹಾಗೂ ಅಂಜಾರು ರಾಮಣ್ಣ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ 1928ರಲ್ಲಿ ಸ್ಥಾಪನೆಗೊಂಡ ತುಳುವ ಮಹಾಸಭೆಯು 2028ಕ್ಕೆ ತನ್ನ 100ನೇ ವರ್ಷದ ಶತಮಾನೋತ್ಸವವನ್ನು ಆಚರಿಸಲಿದೆ.

ಈ ಐತಿಹಾಸಿಕ ಸಂದರ್ಭದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಉದ್ದೇಶದಿಂದ ‘ತುಳುವ ಮಹಾಸಭೆ ಇಂಟರ್ನ್ಯಾಷನಲ್’ ಸಂಘಟನೆಯನ್ನು ರೂಪಿಸಲಾಗಿದ್ದು, ಇದರಡಿ ಮಂಗಳೂರು ವಲಯ ಸಮಿತಿ ರಚನೆಗೆ ಸಿದ್ಧತೆ ನಡೆದಿದೆ.

ಈ ಕುರಿತಂತೆ ಸೆಪ್ಟೆಂಬರ್ 3, 2026ರಂದು ಸಂಜೆ 3:30 ಗಂಟೆಗೆ ಮಂಗಳೂರಿನ ಉರ್ವ ಸ್ಟೋರ್ (ಪೊಲೀಸ್ ಸ್ಟೇಷನ್ ಹತ್ತಿರ) ಬಳಿ ಇರುವ ಮಂಗಳೂರು ತಾಲೂಕು ಮಹಿಳಾ ಮಂಡಳಗಳ ಒಕ್ಕೂಟದ ಸಭಾಂಗಣದಲ್ಲಿ ಸಮಿತಿ ರಚನಾ ಸಭೆ ನಡೆಯಲಿದೆ.

“ನೂರು ವರ್ಷಗಳ ಪರಂಪರೆ – ಮುಂದಿನ ಶತಮಾನಕ್ಕೆ ಹೊಸ ಸಂಕಲ್ಪ” ಎಂಬ ಧ್ಯೇಯವಾಕ್ಯದೊಂದಿಗೆ ಈ ಸಭೆ ನಡೆಯಲಿದೆ. ಮಂಗಳೂರು ವಲಯದ ಸಮಸ್ತ ತುಳು ಬಂಧುಗಳು, ತುಳು ಭಾಷೆ-ಸಂಸ್ಕೃತಿಯ ಅಭಿಮಾನಿಗಳು, ಯುವಕರು, ಮಹಿಳೆಯರು ಹಾಗೂ ಸಮಾಜಮುಖಿ ಕಾರ್ಯಕರ್ತರು ಈ ಮಹತ್ವದ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತುಳುವಿನ ಭವಿಷ್ಯದ ಸಂಕಲ್ಪಕ್ಕೆ ಸಹಕಾರ ನೀಡಬೇಕಾಗಿ ತುಳುವರ್ಲ್ಡ್ ಫೌಂಡೇಶನ್‌ನ ಸಂಚಾಲಕರಾದ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರು ಆಹ್ವಾನಿಸಿದ್ದಾರೆ.

-ಮಂದಾರ ರಾಜೇಶ್